ಪಟಿಯಾಲ, ಏ. 28: ಪಂಜಾಬ್ನ ಪಟಿಯಾಲದಲ್ಲಿ ತಡರಾತ್ರಿ ರೈಲ್ವೇ ಹಳಿ ಬಳಿ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಹಳಿ ಹಾನಿಗೊಳಗಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಂಭು-ಅಂಬಾಲ ರೈಲು ಹಳಿಯಲ್ಲಿ ಸ್ಫೋಟದ ಸ್ಥಳದ ಬಳಿ ಒಂದು ಮೃತದೇಹ ಪತ್ತೆಯಾಗಿದ್ದು, ತನಿಖೆ ಆರಂಭಿಸಲಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಸರಕು ರೈಲುಗಳಿಗೆ ಮೀಸಲಾಗಿರುವ ರೈಲ್ವೆ ಹಳಿಯ ಬಳಿ ಸ್ಫೋಟ ಸಂಭವಿಸಿದೆ.ಸ್ಫೋಟದ ನಂತರ, ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿಪಿ) ಮತ್ತು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ತಂಡಗಳು ಕೂಡ ತನಿಖೆಗಾಗಿ ಸ್ಥಳಕ್ಕೆ ತಲುಪಿದವು. ವಿಧಿವಿಜ್ಞಾನ ತಜ್ಞರ ತಂಡವೂ ಮಾದರಿಗಳನ್ನು ಸಂಗ್ರಹಿಸಿದರು. ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ ಎಂದು ಪಟಿಯಾಲ ಎಸ್ಎಸ್ಪಿ ವರುಣ್ ಶರ್ಮಾ ಹೇಳಿದ್ದಾರೆ, ಹಳಿಗಳ ಬಳಿ ಪತ್ತೆಯಾದ ಶವವು ಛಿದ್ರಗೊಂಡ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.
ಜನವರಿಯ ಆರಂಭದಲ್ಲಿ, ಪಂಜಾಬ್ನ ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್ನಲ್ಲಿರುವ ಸರಕು ಸಾಗಣೆ ಕಾರಿಡಾರ್ ಕೂಡ ಆಗಿರುವ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆ ಜನವರಿ 24 ರಂದು, ಗಣರಾಜ್ಯೋತ್ಸವಕ್ಕೆ ಕೇವಲ ಎರಡು ದಿನಗಳ ಮೊದಲು ನಡೆದಿದ್ದು, ಲೋಕೋ ಪೈಲಟ್ ಗಾಯಗೊಂಡಿದ್ದರು.
ಗಾಯಗೊಂಡ ಲೋಕೋ ಪೈಲಟ್ ಅನ್ನು ಅನಿಲ್ ಶರ್ಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಹಾನಿಗೊಳಗಾದ ರೈಲು ಫುಟ್ಪ್ಲೇಟ್ ತಪಾಸಣೆಯಲ್ಲಿದ್ದು, ಗೋಬಿಂದ್ಗಢದಿಂದ ಸಿರ್ಹಿಂದ್ ಕಡೆಗೆ ಬರುತ್ತಿತ್ತು ಎಂದು ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಈ ದಾಳಿಯನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ನಡೆಸಿದೆ ಎನ್ನುವ ಮಾಹಿತಿ ಹರಿದಾಡಿತ್ತು. ಆದರೆ, ಪೊಲೀಸರು ಈ ಆರೋಪಗಳನ್ನು ಪರಿಶೀಲಿಸಲು ನಿರಾಕರಿಸಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದರು.
