ಬೆಂಗಳೂರು,ಏ.28- ನಾಲ್ಕು ಓಟ್‌ಗೋಸ್ಕರ ದೇಶದ್ರೋಹಿಗಳನ್ನು ಬ್ರದರ್ಸ್ ಎಂದು ಸಮರ್ಥನೆ ಮಾಡಿಕೊಳ್ಳುವ ಸ್ವಾರ್ಥಿಗಳು ನಾಡಿನ ಸಿಎಂ ಆಗಲು ಹೊರಟಿರುವುದು ಕರ್ನಾಟಕದ ದುರಂತ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ .ಅಶೋಕ್ ವಾಗ್ದಳಿ ನಡೆಸಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅಂದು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟವನ್ನು ಕೇವಲ ಡೈವರ್ಶನ್ ಪಾಲಿಟಿಕ್ಸ್ ಎಂದು ಲೇವಡಿ ಮಾಡಿ ಉಗ್ರರ ಪರ ನಿಂತಿದ್ದ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರಿಗೆ ಈಗ ಸತ್ಯದ ದರ್ಶನವಾಗಿದೆ ಎಂದು ಟೀಕಿಸಿದ್ದಾರೆ.
ಅದೇ ಪ್ರಕರಣದ ಉಗ್ರ ಶಾರೀಕ್‌ನ ಕೃತ್ಯ ಸಾಬೀತಾಗಿದ್ದು, ಎನ್ ಐಎ ನ್ಯಾಯಾಲಯ ಆತನಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರದಲ್ಲೂ ಕೇವಲ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷದ ನೈಜ ಮುಖವಾಡ ಕಳಚಿದೆ ಎಂದು ಕಿಡಿಕಾರಿದ್ದಾರೆ.
ದೇಶದ ಭದ್ರತೆಗಿಂತ ಕಾಂಗ್ರೆಸ್‌ಗೆ ಓಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಗಿದೆ. ಕಾಂಗ್ರೆಸ್ ಇನ್ನಾದರೂ ಮತಾಂಧರನ್ನು ತಮ ಬ್ರದರ್ಸ್ ಎಂದು ಸಮರ್ಥನೆ ಮಾಡಿಕೊಳ್ಳುವುದನ್ನು ಬಿಡಬೇಕಿದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
