ಬೆಂಗಳೂರು,ಏ.29-ಒಂದು ದಿನವಾದರೂ ರಾಜ್ಯದಲ್ಲಿ ಡ್ರಗ್ಸ್ ಸಿಗದ ರೀತಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕೆಂದು ಈಗಾಗಲೇ ಪೊಲೀಸರಿಗೆ ತಿಳಿಸಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸರು ವಶಪಡಿಸಿಕೊಂಡಿರುವ ಡ್ರಗ್ಸ್ ಬಗ್ಗೆ ವಿವರಿಸಿ ಮಾತನಾಡಿದ ಅವರು, ಒಂದು ದಿನವಾದರೂ ಸಹ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡ್ರಗ್ಸ್ ಸಿಗದಂತೆ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದೇವೆ ಎಂದರು.
ಡ್ರಗ್ಸ್ ಸಾಗಾಟ, ಉತ್ಪಾದನೆ ಮತ್ತು ಉಪಯೋಗ ಈ ಮೂರು ವಿಷಯಗಳ ಬಗ್ಗೆ ಗಮನಹರಿಸಬೇಕೆಂದು ಪೊಲೀಸರಿಗೆ ತಿಳಿಸಿದ್ದೇವೆ. ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸರ್ಕಾರ ಬಂದ ನಂತರ ಡ್ರಗ್ಸ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಟಾಸ್ಕ್‌ಪೋರ್ಸ್ ರಚಿಸಲಾಗಿದೆ. ಅದು ಸಹ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಅವರು ವಿವರಿಸಿದರು.
ಡ್ರಗ್ಸ್ ನಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಅದನ್ನು ತಪ್ಪಿಸಬೇಕು. ಡ್ರಗ್ಸ್ ಬಗ್ಗೆ ಶಾಲಾ ಕಾಲೇಜುಗಳಿಗೆ ಪೊಲೀಸರು ಹೋಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ತಿಳುವಳಿಕೆ ನೀಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಈ ಕೆಲಸ ಮಾಡುತ್ತಿದ್ದು, ಯಶಸ್ಸು ಕಂಡು ಬಂದಿದೆ ಎಂದು ಹೇಳಿದರು.
ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಡ್ರಗ್ಸ್ ನಿರ್ಮೂಲನೆಗೆ ಪಣತೊಟ್ಟಿದ್ದು ಆ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಉತ್ತಮ ಬಂದೋಬಸ್ತ್:
ನಗರದಲ್ಲಿ ಇದುವರೆಗೂ ಐದು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆದಿದ್ದು, ಪೊಲೀಸರು ಉತ್ತಮವಾಗಿ ಬಂದೋಬಸ್ತ್ ಮಾಡಿದ್ದರು. ಬಂದೋಬಸ್ತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮುಂಬೈ, ಹೈದರಾಬಾದ್, ದೆಹಲಿ ಪೊಲೀಸರು ಸಹ ಇಲ್ಲಿಗೆ ಬಂದು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಉತ್ತಮ ರೀತಿಯಲ್ಲಿ ಬಂದೋಬಸ್ತ್ ಮಾಡಿದ್ದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆಂದು ಇದೇ ವೇಳೆ ಸಚಿವರು ತಿಳಿಸಿದರು.
