ಬೆಂಗಳೂರು,ಏ.29- ಪಶ್ಚಿಮಬಂಗಾಳದ ಎರಡನೇ ಹಂತದ ಮತದಾನದ ಮೂಲಕ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನು ಮುಂದೆ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ಕಾರ್ಯ ಒತ್ತಡದಲ್ಲಿದ್ದರು. ಈ ಕಾರಣಕ್ಕೆ ರಾಜ್ಯದಿಂದ ತೆರಳುವ ಶಾಸಕರು, ಸಚಿವರ ನಿಯೋಗಕ್ಕೆ ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲಾ ಚುನಾವಣೆಗಳು ಮುಕ್ತಾಯವಾಗಿವೆ. ರಾಹುಲ್ ಗಾಂಧಿ ದೆಹಲಿಗೆ ಮರಳಿದ್ದಾರೆ. ಶೀಘ್ರವೇ ವಿದೇಶಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದಕ್ಕೂ ಮುನ್ನ ಕರ್ನಾಟಕದ ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ಪುನರ್‌ರಚನೆ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ.
ನಾಯಕತ್ವ ಬದಲಾವಣೆ ರಾಹುಲ್‌ಗಾಂಧಿ ಅವರಿಗೆ ಇಷ್ಟವಿಲ್ಲದೇ ಇರುವ ಕಾರಣಕ್ಕಾಗಿ ಇಲ್ಲಿವರೆಗೂ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತ್ಯೇಕವಾಗಿ ಭೇಟಿ ಮಾಡಲು ಸಮಯ ನೀಡಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಪದೇ ಪದೇ ದೆಹಲಿಗೆ ಹೋಗಿ ಒತ್ತಡ ಹಾಕುತ್ತಲೇ ಬಂದಿದ್ದಾರೆ. ಹಲವಾರು ಬಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ, ತಮ ಅಹವಾಲನ್ನು ಹೇಳಿಕೊಂಡಿದ್ದಾರೆ. ಆದರೆ ರಾಹುಲ್‌ಗಾಂಧಿ ಅವರ ಭೇಟಿ ಸಾಧ್ಯವಾಗಿಲ್ಲ.
ಸಿದ್ದರಾಮಯ್ಯ ಅವರು ರಾಹುಲ್‌ಗಾಂಧಿ ಹೇಳಿದರೆ ಮಾತ್ರ ಕುರ್ಚಿ ಬಿಡುತ್ತೇನೆ ಎಂದಿದ್ದಾರೆ. ಆ ವಿಚಾರವನ್ನು ವಿವರಿಸಿ ನಾಯಕತ್ವ ಬದಲಾವಣೆಗೆ ಮುನ್ನುಡಿ ಬರೆಯಲು ನಾನಾ ರೀತಿ ಕಸರತ್ತುಗಳಾಗುತ್ತಿವೆ. ಆದರೂ ರಾಹುಲ್ ಗಾಂಧಿ ಭೇಟಿಗೆ ಸಮಯ ನೀಡಿಲ್ಲ. ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರತಿ ಬಾರಿಯೂ ಡಿ.ಕೆ.ಶಿವಕುಮಾರ್ ಅವರನ್ನು ಸಮಾಧಾನ ಪಡಿಸಿ ಕಳುಹಿಸುತ್ತಿದ್ದಾರೆ.
ಆದರೆ ಈ ಭಾರಿ ಕಷ್ಟಸಾಧ್ಯವಾಗುತ್ತಿದೆ. ರಾಹುಲ್ ಗಾಂಧಿ ದೆಹಲಿಗೆ ಮರಳಿರುವುದರಿಂದ ಡಿ.ಕೆ.ಶಿವಕುಮಾರ್ ಈ ವಾರದೊಳಗೆ ಮತ್ತೆ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. ಈ ವರೆಗೂ ಚುನಾವಣೆ ಹಾಗೂ ಇತರ ಕಾರ್ಯಗಳ ನೆಪವೊಡ್ಡಿ ಸಮಯ ದೂಡುತ್ತಿದ್ದ ರಾಹುಲ್ ಗಾಂಧಿ, ಈಗ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ಸಚಿವರಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿಯವರು ಇಂದು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಚುನಾವಣೆಯ ಪ್ರಕ್ರಿಯೆಗಳು ಮುಗಿದರೂ ಚುನಾವಣೆ ಫಲಿತಾಂಶ ಬರುವವರೆಗೂ ತಾಳೆಯಿಂದ ಇರುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
