ಮೆಲ್ಬೋರ್ನ್, ಏ.29- ಆಸ್ಟ್ರೇಲಿಯಾ ಸರ್ಕಾರವು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಮ್ಮ ಆದಾಯದ ಒಂದು ಭಾಗವನ್ನು ಸುದ್ದಿ ಸಂಸ್ಥೆಗಳಿಗೆ ನೀಡುವಂತೆ ಪ್ರೋತ್ಸಾಹಿಸಲು ಹೊಸ ಮಸೂದೆ ಕರಡು ಪ್ರಕಟಿಸಿದೆ. ಜುಲೈ 2ರೊಳಗೆ ಸಂಸತ್ತಿನಲ್ಲಿ ಈ ಮಸೂದೆ ಮಂಡಿಸಲು ಉದ್ದೇಶಿಸಲಾಗಿದೆ.
ಈ ಯೋಜನೆಯ ಪ್ರಕಾರ, ದೊಡ್ಡ ಡಿಜಿಟಲ್ ವೇದಿಕೆಗಳು ಸುದ್ದಿ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು ಪತ್ರಿಕೋದ್ಯಮಕ್ಕೆ ಹಣ ಪಾವತಿಸುವಂತೆ ಪ್ರೇರಣೆ ನೀಡಲಾಗುತ್ತದೆ. ಒಪ್ಪಂದ ಮಾಡದ ಸಂಸ್ಥೆಗಳ ಮೇಲೆ ಅವರ ಆಸ್ಟ್ರೇಲಿಯಾ ಆದಾಯದ ಶೇಕಡಾ 2.25 ತೆರಿಗೆ ವಿಧಿಸುವ ಪ್ರಸ್ತಾಪ ಇದೆ.
ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಪತ್ರಕರ್ತರ ಪರಿಶ್ರಮಕ್ಕೆಹಣದ ಮೌಲ್ಯ ನೀಡಬೇಕೆಂದು ಹೇಳಿದ್ದಾರೆ.ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಸುದ್ದಿಯನ್ನು ಬಳಸಿ ಲಾಭ ಗಳಿಸುತ್ತಿದ್ದರೆ, ಅದನ್ನು ಸೃಷ್ಟಿಸುವವರಿಗೆ ಸಮರ್ಪಕ ಪರಿಹಾರ ದೊರಕಬೇಕು ಎಂದು ಅವರು ತಿಳಿಸಿದ್ದಾರೆ.
ಸ್ವಸ್ಥ ಪ್ರಜಾಪ್ರಭುತ್ವಕ್ಕೆ ಪತ್ರಿಕೋದ್ಯಮದಲ್ಲಿ ಹೂಡಿಕೆ ಅಗತ್ಯ ಎಂದು ಕೂಡ ಹೇಳಿದ್ದಾರೆ. ಇದು ಆಸ್ಟ್ರೇಲಿಯಾದಿಂದ ಡಿಜಿಟಲ್ ವೇದಿಕೆಗಳಿಗೆ ಹಣ ಪಾವತಿಸಲು ಮಾಡಿದ ಎರಡನೇ ಪ್ರಯತ್ನವಾಗಿದೆ. 2021ರಲ್ಲಿ ಜಾರಿಗೆ ಬಂದ ನ್ಯೂಸ್ ಮೀಡಿಯಾ ಬಾರ್ಗೈನಿಂಗ್ ಕೋಡ್ ಮೂಲಕ ವೇದಿಕೆಗಳು ಸುದ್ದಿ ಸಂಸ್ಥೆಗಳೊಂದಿಗೆ ವಾಣಿಜ್ಯ ಒಪ್ಪಂದಗಳಿಗೆ ಬಂದಿದ್ದವು. ಆದರೆ ನಂತರ ಕೆಲವು ಕಂಪನಿಗಳು ತಮ ಸೇವೆಗಳಿಂದ ಸುದ್ದಿಯನ್ನು ತೆಗೆದುಹಾಕುವ ಮೂಲಕ ಆ ಒಪ್ಪಂದಗಳನ್ನು ನವೀಕರಿಸಲು ತಪ್ಪಿಸಿಕೊಂಡಿವೆ.
ಹೊಸ ಯೋಜನೆಯ ಮೂಲಕ ವರ್ಷಕ್ಕೆ ಸುಮಾರು 200 ರಿಂದ 250 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಸಂಗ್ರಹವಾಗಬಹುದು ಎಂದು ಸರ್ಕಾರ ಅಂದಾಜಿಸಿದೆ.ಈ ಹಣವನ್ನು ಸುದ್ದಿ ಸಂಸ್ಥೆಗಳಿಗೆ, ಅವರು ಹೊಂದಿರುವ ಪತ್ರಕರ್ತರ ಸಂಖ್ಯೆಯ ಆಧಾರದ ಮೇಲೆ ಹಂಚಲಾಗುತ್ತದೆ ಎಂದು ಸಂವಹನ ಸಚಿವೆ ಅನಿಕಾ ವೆಲ್‌್ಸತಿಳಿಸಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮೀಟಾ, ಸುದ್ದಿ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ನಮ ವೇದಿಕೆಗಳಲ್ಲಿ ವಿಷಯವನ್ನು ಪ್ರಕಟಿಸುತ್ತವೆ; ನಾವು ಅದನ್ನು ಕದ್ದುಕೊಳ್ಳುವುದಿಲ್ಲ ಎಂದು ಹೇಳಿದೆ.ಈ ತೆರಿಗೆ ಅಗತ್ಯವಿಲ್ಲ; ಜಾಹೀರಾತು ಮಾರುಕಟ್ಟೆಯ ಬದಲಾವಣೆಗಳನ್ನು ಇದು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಪ್ರತಿಕ್ರಿಯಿಸಿದೆ.
ಅಮೆರಿಕದ ಕಂಪನಿಗಳಾಗಿರುವ ಈ ಸಂಸ್ಥೆಗಳ ಮೇಲೆ ತೆರಿಗೆ ವಿಧಿಸುವುದರಿಂದ ಅಮೆರಿಕದ ವಿರೋಧ ಎದುರಾಗಬಹುದು ಎಂಬ ಆತಂಕಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲವೆಂದು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.ನಾವು ಸ್ವತಂತ್ರ ರಾಷ್ಟ್ರ; ನಮ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
