ಬೆಂಗಳೂರು, ಏ.29 – ಮಾದಕ ವಸ್ತುಗಳ ಜಾಲಗಳನ್ನು ಭೇದಿಸಿರುವ ನಗರ ಪೊಲೀಸರು ಬೃಹತ್ ಮಟ್ಟದಲ್ಲಿ ದಾಳಿ ನಡೆಸಿ 16 ಆರೋಪಿಗಳನ್ನು ಬಂಧಿಸಿ, 36.67 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರ ಪೈಕಿ ನಾಲ್ವರು ವಿದೇಶಿ ಪ್ರಜೆಗಳು, ಎಂಟು ಮಂದಿ ಹೊರರಾಜ್ಯದವರು ಹಾಗೂ ನಾಲ್ವರು ಸ್ಥಳೀಯರು ಸೇರಿದ್ದು, ಈ ಜಾಲವು ಅಂತರ್‌ರಾಜ್ಯ ಹಾಗೂ ಅಂತರ್‌ರಾಷ್ಟ್ರೀಯ ಸಂಪರ್ಕ ಹೊಂದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳಿಂದ 9 ಕೆಜಿ 64 ಗ್ರಾಂ ಎಂಡಿಎಂಎ, 5 ಕೆಜಿ 195 ಗ್ರಾಂ ಹೈಡ್ರೋ ಗಾಂಜಾ, 19,755 ಎಲ್‌ಎಸ್‌ಡಿ ಸ್ಟ್ರಿಪ್‌ಗಳು, 156 ಗ್ರಾಂ ಹೆರಾಯಿನ್, 618 ಗ್ರಾಂ ಚರಸ್, 332 ಗ್ರಾಂ ಕೊಕೇನ್, 315 ಗ್ರಾಂ ಡ್ರಗ್ ಮಿಶ್ರಿತ ಗಮೀಸ್ ಹಾಗೂ 11 ಕೆಜಿ 470 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ನಗರದಲ್ಲಿ ಮಾದಕ ವಸ್ತು ಸಾಗಾಣಿಕೆ ವಿರುದ್ಧ ಕೈಗೊಳ್ಳಲಾದ ಪ್ರಮುಖ ಕಾರ್ಯಾಚರಣೆಯಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಬಾಗಲೂರು, ಆಡುಗೋಡಿ, ಚಿಕ್ಕಜಾಲ, ಹೆಚ್‌ಎಸ್‌ಆರ್ ಲೇಔಟ್, ಯಶವಂತಪುರ, ಜಾಲಹಳ್ಳಿ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆಗಳ ಸಹಕಾರದೊಂದಿಗೆ ಈ ಜಾಲವನ್ನು ಭೇದಿಸಿ ಡ್ರಗ್ ಪೆಡ್ಲರ್‌ಗಳ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿವಿಧ ದಿನಾಂಕಗಳಲ್ಲಿ ಲಭಿಸಿದ ನಿಖರ ಮಾಹಿತಿ ಆಧಾರದ ಮೇಲೆ ಸಿಸಿಬಿ, ಪೂರ್ವ ಮತ್ತು ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಆರೋಪಿಗಳು ವಿದೇಶದಿಂದ, ಹೊರರಾಜ್ಯ ಹಾಗೂ ಸ್ಥಳೀಯ ಮೂಲಗಳಿಂದ ಕಡಿಮೆ ದರದಲ್ಲಿ ಮಾದಕ ವಸ್ತುಗಳನ್ನು ಪಡೆದು ನಗರದಲ್ಲಿ, ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಗಳ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಈ ಕಾರ್ಯಾಚರಣೆ ಮೂಲಕ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ದುರುಪಯೋಗದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಪುನರುಚ್ಚರಿಸಲಾಗಿದೆ. ಮಾದಕ ವಸ್ತುಗಳ ಸಾಗಾಣಿಕೆ ಅಥವಾ ದುರುಪಯೋಗಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಪೊಲೀಸ್ ಇಲಾಖೆಗೆ ನೀಡುವ ಮೂಲಕ ಸಕ್ರಿಯ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ. ಮಾಹಿತಿಯನ್ನು ಗೌಪ್ಯವಾಗಿ 1922 ಅಥವಾ 112 ಸಹಾಯವಾಣಿ ಸಂಖ್ಯೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕಾರ್ಯಾಚರಣೆ ವೇಳೆ ಸಿಸಿಬಿ ಪೊಲೀಸರು 17.50 ಕೋಟಿ ರೂ. ಮೌಲ್ಯದ 5 ಕೆಜಿ 155 ಗ್ರಾಂ ಎಂಡಿಎಂಎ, 5 ಕೆಜಿ 195 ಗ್ರಾಂ ಹೈಡ್ರೋ ಗಾಂಜಾ, 332 ಗ್ರಾಂ ಕೊಕೇನ್, 315 ಗ್ರಾಂ ಗಮೀಸ್ ವಶಪಡಿಸಿಕೊಂಡರೆ, ಬಾಗಲೂರು ಠಾಣೆ ಪೊಲೀಸರು 11.87 ಕೋಟಿ ರೂ. ಮೌಲ್ಯದ 95,755 ಎಲ್‌ಎಸ್‌ಡಿ ಸ್ಟ್ರಿಪ್‌ಗಳು, 358 ಗ್ರಾಂ ಚರಸ್ ವಶಪಡಿಸಿಕೊಂಡಿದ್ದಾರೆ. ಆಡುಗೋಡಿ ಪೊಲೀಸರು 62.40 ಲಕ್ಷ ರೂ. ಮೌಲ್ಯದ 156 ಗ್ರಾಂ ಹೆರಾಯಿನ್, ಚಿಕ್ಕಜಾಲ ಠಾಣೆ ಪೊಲೀಸರು 15 ಲಕ್ಷ ರೂ. ಮೌಲ್ಯದ 710 ಗ್ರಾಂ ಮಾದಕ ವಸ್ತು, ಹೆಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು 8.76 ಲಕ್ಷ ರೂ. ಮೌಲ್ಯದ 6 ಕೆಜಿ 170 ಗ್ರಾಂ ಗಾಂಜಾ ಮತ್ತು 260 ಗ್ರಾಂ ಚರಸ್ ವಶಪಡಿಸಿಕೊಂಡಿದ್ದಾರೆ. ಯಶವಂತಪುರ ಠಾಣೆ ಪೊಲೀಸರು ಮೂರು ಪ್ರಕರಣಗಳಲ್ಲಿ 6.36 ಕೋಟಿ ರೂ. ಮೌಲ್ಯದ 3 ಕೆಜಿ 182 ಗ್ರಾಂ ಎಂಡಿಎಂಎ, ಜಾಲಹಳ್ಳಿ ಠಾಣೆ ಪೊಲೀಸರು 5.30 ಲಕ್ಷ ರೂ. ಮೌಲ್ಯದ 5 ಕೆಜಿ 300 ಗ್ರಾಂ ಗಾಂಜಾ ಹಾಗೂ ಜ್ಞಾನಭಾರತಿ ಠಾಣೆ ಪೊಲೀಸರು 3.40 ಲಕ್ಷ ರೂ. ಮೌಲ್ಯದ 17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
