ಬೆಂಗಳೂರು,ಏ.29- ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಮುಖ್ಯಮಂತ್ರಿಗಾದಿಗಾಗಿ ತೀವ್ರ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಸರ್ಕಾರ ಗುಪ್ತದಳದ ಮುಖ್ಯಸ್ಥರ ಬದಲಾವಣೆ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದುವರೆಯಲು ಅಪೇಕ್ಷಿಸುತ್ತಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಮುಖ್ಯಮಂತ್ರಿಯಾಗಲು ತೀವ್ರ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲೇ ಗುಪ್ತದಳದ ಮುಖ್ಯಸ್ಥರನ್ನು ವರ್ಗಾವಣೆ ಮಾಡಿರುವುದು ರಾಜಕೀಯ ಹಾಗೂ ಪೊಲೀಸ್ ಅಧಿಕಾರಿಗಳ ವಲಯದಲ್ಲೇ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ವಲಯದ ಐಜಿಪಿ ಹುದ್ದೆಯಿಂದ ಲಾಬು ರಾಮ್ ಅವರನ್ನು ಗುಪ್ತದಳದ ಐಜಿಪಿ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.ಗುಪ್ತದಳದ ಎಡಿಜಿಪಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಅವರನ್ನು ಕೆಎಸ್‌ಆರ್‌ಪಿಯ ಎಡಿಜಿಪಿ ಹುದ್ದೆಗೆ ವರ್ಗಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
ಈ ಹುದ್ದೆಯ ಸಮವರ್ತಿತ ಪ್ರಭಾರದಲ್ಲಿದ್ದ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ಮಾದಕದ್ರವ್ಯ ನಿಗ್ರಹ ಕಾರ್ಯಪಡೆಯ ಡಿಐಜಿ ಎಸ್.ಗಿರೀಶ್ ಅವರನ್ನು ಕೇಂದ್ರ ವಲಯದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
