ಬೆಂಗಳೂರು,ಏ.29- ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಿಂದ 8 ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರ ಸುಳಿವು ಇದುವರೆಗೂ ಪತ್ತೆಯಾಗದ ಹಿನ್ನೆಯಲ್ಲಿ ಈ ಪ್ರಕರಣವನ್ನು ಇದೀಗ ಸಿಐಡಿಗೆ ವರ್ಗಾಹಿಸಲಾಗಿದೆ.
ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಈಕೆಯ ಜ್ಯೂನಿಯರ್ ತೇಜಸ್ವಿನಿ ಆಧಾರ್‌ಕಾರ್ಡ್‌ನ್ನು ಮಾತ್ರ ತೆಗೆದುಕೊಂಡು ಮನೆಯಿಂದ ಹೊರಹೋಗಿದ್ದು, ಅವರ ಪೋಷಕರು ಕಂಗಾಲಾಗಿದ್ದಾರೆ.
ಇವರಿಬ್ಬರು ನಾಪತ್ತೆಯಾಗಿರುವ ಬಗ್ಗೆ ವಿದ್ಯಾರಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರ ತನಿಖೆ ವೇಳೆ ಈ ಇಬ್ಬರು ವಿದ್ಯಾರ್ಥಿನಿಯರು ಪ್ರಾರಂಭದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಸುಳಿವನ್ನು ಪತ್ತೆಹಚ್ಚಿ ಹುಡುಕಾಟ ನಡೆಸಿದಾಗ ಅಲ್ಲಿರಲಿಲ್ಲ.
ಮೈಸೂರು, ಚೆನ್ನೈ,ಕೊಯಮತ್ತೂರು,ಕೇರಳ,ದೆಹಲಿ,ಹೀಗೆ ದೇಶದ 100ಕ್ಕೂ ಹೆಚ್ಚು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಈ ವಿದ್ಯಾರ್ಥಿನಿಯರು ಪತ್ತೆಯಾಗಿಲ್ಲ. ಇವರಿಬ್ಬರು ಯಾವುದೇ ಮೊಬೈಲ್‌ಗಳಾಗಲೀ ಅಥವಾ ಎಟಿಎಂ ಕಾರ್ಡ್‌ಗಳನ್ನು ಬಳಸುತ್ತಿಲ್ಲ. ಅಲ್ಲದೇ ಸ್ನೇಹಿತರಾಗಲೀ, ಸಂಬಂಽಕರು, ಕುಟುಂಬ ಸದಸ್ಯರನ್ನು ಸಂಪರ್ಕಿಸದಿರುವುದು ಗೊತ್ತಾಗಿದೆ. ಹಾಗಾಗಿ ಇವರಿಬ್ಬರ ಪತ್ತೆಕಾರ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ತಮ್ಮ ಮಕ್ಕಳು ಪತ್ತೆಯಾಗದ ಹಿನ್ನಲೆಯಲ್ಲಿ ಪೋಷಕರು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಹಿಸಿದೆ.ಇದೀಗ ಸಿಐಡಿಯ ವಿಶೇಷ ತಂಡವು ವಿದ್ಯಾರ್ಥಿನಿಯರ ಪತ್ತೆಗೆ ಮುಂದಾಗಿದೆ.
