ಬೆಂಗಳೂರು,ಏ.2- ಸೈಬರ್ ಮತ್ತು ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳು ರಾಷ್ಟ್ರೀಯ ಸರಾಸರಿಗಿಂತ ರಾಜ್ಯದಲ್ಲಿ ಹೆಚ್ಚಾಗಿದ್ದು ಇವುಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಕೋರಮಂಗಲದ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ 158 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.
ಯಾವುದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಯಾ ಠಾಣಾಧಿಕಾರಿಯ ಗಮನಕ್ಕೆ ಬರದಂತೆ ಯಾವುದೇ ಅಪರಾಧಗಳು, ಕೆಟ್ಟ ವ್ಯವಹಾರಗಳು ನಡೆಯಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ. ಆಯಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅನೇಕ ಅಪರಾಧಗಳನ್ನು ತಡೆಗಟ್ಟಬಹುದು ಎಂದರು.

ಹಲವು ಬಾರಿ ಸೂಚನೆ ನೀಡಿದ್ದರೂ ಆಯಾ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪ್ರಯತ್ನಿಸದಿದ್ದರೆ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಜವಾಬ್ದಾರರನ್ನಾಗಿ ಮಾಡಬೇಕು. ಅಂಥವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ತಂತ್ರಜ್ಞಾನ ಬಳಸಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬೇಕು. ತಂತ್ರಜ್ಞಾನ ಬಳಕೆಯಲ್ಲಿ ಇಲಾಖೆ ಹಿಂದುಳಿದಿರುವ ಮಾಹಿತಿ ಇದೆ ಎಂದು ಹೇಳಿದರು. ಸೈಬರ್ ಅಪರಾಧಗಳು, ಮಾದಕದ್ರವ್ಯ ಅಪರಾಧಗಳು ಕಡಿಮೆ ಮಾಡಬೇಕು. ಯುವಕರು ಜೀವನ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಲು ಮಾದಕದ್ರವ್ಯ ಬಳಕೆಯನ್ನು ತಪ್ಪಿಸಬೇಕು. ಮಾದಕದ್ರವ್ಯ ಅಪರಾಧಗಳ ತಡೆಗೆ ಎರಡು ವಿಶೇಷ ಕಾರ್ಯಾಚರಣೆಗಳನ್ನು ರಚನೆ ಮಾಡಲಾಗಿದೆ. ರಾಜ್ಯವನ್ನು ಮಾದಕದ್ರವ್ಯ ವ್ಯಸನಮುಕ್ತ ಮಾಡಲು ಉದ್ದೇಶಿಸಿದ್ದು, ಇದು ಪೊಲೀಸ್ ಇಲಾಖೆಯ ಗುರಿಯೂ ಆಗಬೇಕಿದೆ ಎಂದರು.

ಹಲವು ರೀತಿಯ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಿ ಶಿಕ್ಷೆ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ ಮುಂದಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸುವ ಜೊತೆಗೆ ಪ್ರಮಾಣ ಹೆಚ್ಚಾಗಿರುವ ಅಪರಾಧಗಳ ನಿಯಂತ್ರಣದಲ್ಲೂ ನಾವು ಶ್ರಮ ಹಾಕಬೇಕಿದೆ ಎಂದು ಸೂಚಿಸಿದರು. ಸಮಯದ ಮಿತಿ ಇಲ್ಲದಂತೆ ದಿನದ 24 ಗಂಟೆಯೂ ಕರ್ತವ್ಯಪ್ರಜ್ಞೆ ಇಟ್ಟುಕೊಂಡು ಪೊಲೀಸರು ಕೆಲಸ ಮಾಡುವುದರಿಂದ ಸಮಾಜದಲ್ಲಿ ನೆಮದಿ ಮತ್ತು ಸೌಹಾರ್ದತೆ ನೆಲೆಸಿದೆ.
ಮಹಿಳೆಯರು, ಮಕ್ಕಳು ಮತ್ತು ದುರ್ಬಲರು ಹಾಗೂ ಅಸಹಾಯಕರ ರಕ್ಷಣೆ ನಮ ಸರ್ಕಾರದ ಮೊದಲ ಆದ್ಯತೆ. ಪೊಲೀಸರೂ ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು. ರಾಜ್ಯದ ಆರ್ಥಿಕ ಬೆಳವಣಿಗೆಗೂ, ಜಿಡಿಪಿ ಪ್ರಗತಿಗೂ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೂ ನೇರನೇರಾ ಸಂಬಂಧ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದರೆ ಆರ್ಥಿಕತೆಗೂ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪದಕ ವಿಜೇತರೆಲ್ಲರಿಗೂ ಶುಭಾಶಯ ಕೋರಿದ ಮುಖ್ಯಮಂತ್ರಿಗಳು, ಇವರ ಕಾರ್ಯ ಮತ್ತು ವೃತ್ತಿಪರತೆ ಇತರರಿಗೂ ಸ್ಫೂರ್ತಿಯಾಗಲಿ ಎಂದು ಸಿದ್ದರಾಮಯ್ಯ ಹಾರೈಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಸೇರಿದಂತೆ ಹಿರಿಯ-ಕಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
