ಬೆಂಗಳೂರು,ಏ.2- ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವನ್ನಪ್ಪಿರುವುದನ್ನು ಕಂಡು ಆಘಾತ ಕ್ಕೊಳಗಾದ ತಾಯಿಯೂ ಆತಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ನಾಗರಬಾವಿ ಮುಖ್ಯರಸ್ತೆ ಭೈರವೇಶ್ವರ ನಗರದ ಎರಡನೇ ಹಂತದ ನಿವಾಸಿ ಪ್ರತಿಭಾ (29) ಎಂಬುವವವರೇ ಮಗು ಅಗಸ್ತ್ಯ (11 ತಿಂಗಳು) ಮೃತಪಟ್ಟಿರುವುದನ್ನು ಕಂಡು ನೇಣಿಗೆ ಶರಣಾದ ತಾಯಿ.
ಸುಮಾರು ನಾಲ್ಕು ವರ್ಷಗಳಿಂದ ಮಹಂತೇಶ್-ಪ್ರತಿಭಾ ದಂಪತಿ ಭೈರವೇಶ್ವರ ನಗರದಲ್ಲಿ ವಾಸವಾಗಿದ್ದು, ದಂಪತಿ 11 ತಿಂಗಳ ಗಂಡು ಮಗುವಿನೊಂದಿಗೆ ನೆಮದಿಯ ಜೀವನ ನಡೆಸುತ್ತಿದ್ದರು.
ಮಹಂತೇಶ್ ಅವರು ಪೀಣ್ಯ ಎರಡನೇ ಹಂತದಲ್ಲಿರುವ ಡಿಸೈನರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದು, ಪತ್ನಿ ಪ್ರತಿಭಾ ಅವರು ಸಿಲ್ಕ್ ಬೋರ್ಡ್ನಲ್ಲಿರುವ ಸಾಫ್ಟ್ ವೇರ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ವರ್ಕ್ ಫ್ರಮ್ ಹೋಂ ಮಾಡುತ್ತಿದ್ದರು.
ನಿನ್ನೆ ಬೆಳಿಗ್ಗೆ 9 ಗಂಟೆ ಸುಮಾರಿನಲ್ಲಿ ಎಂದಿನಂತೆ ಮಹಂತೇಶ್ ಅವರು ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ತಾಯಿ ಮತ್ತು ಮಗು ಇಬ್ಬರೇ ಇದ್ದರು. ಸಂಜೆ ವೇಳೆಗೆ ಮಗು ಆಟವಾಡುತ್ತಿದ್ದಾಗ ಪ್ರತಿಭಾ ಅವರು ಒಣಹಾಕಿದ್ದ ಬಟ್ಟೆ ತರಲು ಟೆರೇಸ್ಗೆ ಹೋಗಿದ್ದಾರೆ.
ಆ ಸಂದರ್ಭದಲ್ಲಿ ಮಗು ಆಟವಾಡುತ್ತಾ ಬಾತ್ರೂಂ ಒಳಗೆ ಹೋಗಿ ಅಲ್ಲಿ ನೀರು ತುಂಬಿದ್ದ ಬಕೆಟ್ನೊಳಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ.ಟೆರೇಸ್ನಿಂದ ಬಟ್ಟೆ ತೆಗೆದುಕೊಂಡು ಪ್ರತಿಭಾ ಅವರು ಮನೆಯೊಳಗೆ ಬಂದಾಗ ಮಗು ಕಾಣಿಸಿಲ್ಲ. ತಕ್ಷಣ ಮನೆಯೊಳಗೆಲ್ಲಾ ಹುಡುಕಿದರೂ ಕಾಣಿಸಿಲ್ಲ. ನಂತರ ಬಾತ್ರೂಂ ಬಳಿ ಹೋಗಿ ನೋಡಿದಾಗ ಬಕೆಟ್ ನೀರಿನಲ್ಲಿ ಮುಳುಗಿರುವುದು ಕಂಡುಬಂದಿದೆ.
ತಕ್ಷಣ ಕಿರುಚಾಡುತ್ತಾ ಮಗುವನ್ನು ನೀರಿನಿಂದ ಹೊರತೆಗೆದು ನೋಡಿದಾಗ ಮಗು ಮೃತಪಟ್ಟಿರುವುದು ಕಂಡು ಗೋಳಾಡಿದ್ದಾರೆ. ಮಗುವಿನ ಸಾವಿನಿಂದ ಆಘಾತಕ್ಕೊಳಗಾದ ಪ್ರತಿಭಾ ಅವರು ಏನು ಮಾಡುವುದೆಂದು ತೋಚದೇ ಆತಹತ್ಯೆಗೆ ನಿರ್ಧರಿಸಿದ್ದಾರೆ. ಆತಹತ್ಯೆಗೂ ಮೊದಲು ಇಂಗ್ಲಿಷ್ನಲ್ಲಿ ಡೆತ್ನೋಟ್ ಬರೆದಿದ್ದು, ಅದರಲ್ಲಿ ನಾನು ಬಟ್ಟೆ ತರಲು ಟೆರೇಸ್ಗೆ ಹೋಗಿದ್ದಾಗ ಬಕೆಟ್ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದೆ. ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ನಾನು ಆತಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ.
ನಂತರ 15 ಡೋಲೋ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ ತದನಂತರ ಚಾಕುವಿನಿಂದ ಎಡಗೈನ ಮುಂಗೈಯನ್ನು ಕೊಯ್ದುಕೊಂಡಿದ್ದಾರೆ. ಆದರೂ ಇದರಿಂದ ತಾನು ಸಾಯುವುದಿಲ್ಲ ಎಂದು ಅರಿತು ನಂತರ ಜೋಕಾಲಿಯ ಹುಕ್ಕಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.
ಸಂಜೆ 6.30ರ ಸುಮಾರಿನಲ್ಲಿ ಪತಿ ಮಹಂತೇಶ್ ಮನೆಗೆ ಬಂದು ಕಾಲಿಂಗ್ಬೆಲ್ ಒತ್ತಿದ್ದಾರೆ. ಬಾಗಿಲು ತೆಗೆಯದಿದ್ದಾಗ ಮತ್ತೆ ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪತ್ನಿ ಪ್ರತಿಭಾ ಅವರ ಮೊಬೈಲ್ಗೆ ಕರೆ ಮಾಡಿದರೂ ಆಕೆ ಸ್ವೀಕರಿಸಿಲ್ಲ.
ಇದರಿಂದ ಗಾಬರಿಯಾದ ಮಹಂತೇಶ್ ಅವರು ಕಿಟಕಿಯ ಒಳಭಾಗದಲ್ಲಿಟ್ಟಿದ್ದ ಕೀಯನ್ನು ತೆಗೆದುಕೊಂಡು ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಪ್ರತಿಭಾ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಮುಂಗೈನಿಂದ ರಕ್ತ ಸೋರಿಕೆಯಾಗಿರುವುದನ್ನು ಮಹಂತೇಶ್ ಗಮನಿಸಿದ್ದಾರೆ. ಪತ್ನಿ ಹೀಗೇಕೆ ಮಾಡಿಕೊಂಡಳು ಎಂದು ಯೋಚಿಸುತ್ತಾ ಹಾಸಿಗೆ ಮೇಲೆ ಮಲಗಿರುವ ರೀತಿಯಲ್ಲಿದ್ದ ಮಗುವಿನ ಬಳಿ ಹೋಗಿ ನೋಡಿದಾಗ ಮಗು ಸಹ ಮೃತಪಟ್ಟಿರುವುದು ಕಂಡು ಒಂದುಕ್ಷಣ ಕಂಗಾಲಾದ ಅವರು ಕುಸಿದಿದ್ದಾರೆ.
ನಂತರ ಹಾಸಿಗೆ ಮೇಲೆ ಒಂದು ಪತ್ರ ಕಂಡುಬಂದಿದೆ. ತಕ್ಷಣ ಆ ಪತ್ರವನ್ನು ತೆಗೆದುಕೊಂಡು ಓದಿದಾಗ ನಡೆದಿರುವ ಘಟನೆಯನ್ನು ಪತ್ನಿ ಉಲ್ಲೇಖಿಸಿರುವುದು ಕಂಡು ಪತಿಯ ದುಃಖದ ಕಟ್ಟೆಯೊಡೆದಿದೆ.ನೆರೆಹೊರೆಯವರಿಗೆ ವಿಷಯ ತಿಳಿದು ಮನೆ ಬಳಿ ಜಮಾಯಿಸಿ ತಾಯಿ-ಮಗುವಿನ ಸಾವು ಕಂಡು ಮಮಲ ಮರುಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ 15 ಮಾತ್ರೆಗಳ ಖಾಲಿ ಶೀಟ್ ಪತ್ತೆಯಾಗಿದೆ. ಆ ಶೀಟ್ ಅನ್ನು ಹಾಗೂ ಡೆತ್ನೋಟ್ ಅನ್ನು ವಶಕ್ಕೆ ಪಡೆದು ನಂತರ ತಾಯಿ-ಮಗುವಿನ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಚಂದ್ರಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
