Thursday, April 16, 2026
Homeರಾಜ್ಯಎಲ್ಲಾ ರಾಜ್ಯಗಳಲ್ಲೂ ದ್ವಿಭಾಷಾ ಶಿಕ್ಷಣದ ವ್ಯವಸ್ಥೆ ಜಾರಿಯಲ್ಲಿದೆ : ಬಿಜೆಪಿಗೆ ಮಧು ಬಂಗಾರಪ್ಪ ತಿರುಗೇಟು

ಎಲ್ಲಾ ರಾಜ್ಯಗಳಲ್ಲೂ ದ್ವಿಭಾಷಾ ಶಿಕ್ಷಣದ ವ್ಯವಸ್ಥೆ ಜಾರಿಯಲ್ಲಿದೆ : ಬಿಜೆಪಿಗೆ ಮಧು ಬಂಗಾರಪ್ಪ ತಿರುಗೇಟು

Bilingual education system is in place in all states: Madhubangarappa

ಬೆಂಗಳೂರು,ಏ.2- ಎಲ್ಲಾ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ವ್ಯವಸ್ಥೆ ಜಾರಿಯಲ್ಲಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು, ತೃತೀಯ ಭಾಷಾ ವಿಷಯಕ್ಕೆ ಅಂಕಗಳಿಗೆ ಬದಲಾಗಿ ಗ್ರೇಡ್‌ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರನ್ನು ಖುಷಿಪಡಿಸಲು ಬಿಜೆಪಿಯವರು ಹಿಂದಿ.. ಹಿಂದಿ…
ಎಂದು ಪ್ರಮೋಟ್‌ ಮಾಡುತ್ತಿರುವುದು ಸರಿಯಲ್ಲ. ಎಲ್ಲಾ ಕಡೆಯು ಎರಡು ಭಾಷೆ ಮಾತ್ರ ಜಾರಿಯಲ್ಲಿದೆ ಎಂದರು.

ಗ್ರಾಮೀಣ ಭಾಗದಲ್ಲಿ ತೃತೀಯ ಭಾಷೆ ಹೇರಿಕೆಯಾಗಿದೆ. ಕೆಲವು ಕಡೆ ಕನ್ನಡ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಕಲಿಯುತ್ತಿದ್ದಾರೆ. ನಮ ಕನ್ನಡಿಗರು ಹೊಟ್ಟೆಪಾಡಿಗಾಗಿ ಹಿಂದಿ ಬೋಧನೆ ಮಾಡುತ್ತಿದ್ದಾರೆ. ಅಂಥವರಿಗೆ ಯಾವುದೇ ಒತ್ತಡ ಆಗಬಾರದು. ಅಲ್ಲದೆ ಯಾವುದೇ ಭಾಷೆ ವಿರುದ್ಧ ನಾವಿಲ್ಲ. ಈಗ ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು ಎಂಬುದನ್ನು ಮುಖ್ಯಮಂತ್ರಿಯವರು ಹೇಳಿದ್ದಾರೆಂದು ತಿಳಿಸಿದರು.

ಬಿಜೆಪಿಯವರು ಟೀಕೆಟಿಪ್ಪಣಿ ಮಾಡುತ್ತಾರೆಂದು ಉತ್ತರ ಕೊಡಲು ಆಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಅವರು ರಾಜ್ಯವನ್ನು ಆಳಿದವರು. ಅವರಿಗೆ ಗೌರವ ಕೊಡುತ್ತೇವೆ. ಆದರೆ ಕನ್ನಡಿಗರಿಗೆ ಮೋಸ ಮಾಡಿದವರೇ ಅವರು. ರಾಜ್ಯದ ತೆರಿಗೆ ಸಂಗ್ರಹ ಕುರಿತಂತೆ ಬಿಜೆಪಿಯವರು ದನಿ ಎತ್ತುವುದಿಲ್ಲ. ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಬರಗಾಲ ಬಂದಾಗಲೂ ಬಿಜೆಪಿಯವರು ದನಿ ಎತ್ತುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಸಿಬಿಎಸ್‌‍ಇ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅದಕ್ಕೆ ನಾವು ನಿಯಮಗಳನ್ನು ರೂಪಿಸಿದ್ದೇವೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ಕನ್ನಡ ಭಾಷಾ ಬಳಕೆ ಕೇಳಿದ್ದೀರಾ? ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಿಕ್ಷಣ ಸಚಿವರಿಗೆ ಶಿಕ್ಷಣವಿಲ್ಲ ಎಂದು ಟೀಕಿಸಿದ್ದಾರೆ. ಅವರು ಹಿಂದಿ ಭಾಷೆ ಮಾತನಾಡುವುದನ್ನು ಕೇಳಿದೀರಾ? ಸಾಮಾಜಿಕ ಮಾಧ್ಯಮದಲ್ಲಿ ನಾನು ಗಮನಿಸಿದ್ದೇನೆ. ಆದರೆ ಶೋಭಾ ಕರಂದ್ಲಾಜೆ ಅವರು ಹಿಂದಿ ಮಾತನಾಡುವುದನ್ನು ನೋಡಿ ನಾವು ರಾಜ್ಯದಲ್ಲಿ ತೃತೀಯ ಭಾಷೆ ಹಿಂದಿ ವಿಚಾರದಲ್ಲಿ ಈ ನಿರ್ಧಾರ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES

Latest News