ಎಚ್.ಡಿ.ಕೋಟೆ,ಏ.5- ಕಬಿನಿ ಹಿನ್ನೀರಿನ ಕಾಡಂಚಿನ ಪ್ರದೇಶದಲ್ಲಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಕೆ.ಹೆಚ್.ಸುರೇಶ್ ಕುಮಾರ್, ಎಂ.ಬಿ.ಮಧುಸೂದನ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಕಾರು, ಡಬಲ್ ಬ್ಯಾರಲ್ ಹಾಗೂ ಸಿಂಗಲ್ ಬ್ಯಾರಲ್ ಗನ್, 14 ಜೀವಂತ ಗುಂಡು, ಗನ್ ಪೌಡರ್, 6 ಉರುಳು ಸೇರಿದಂತೆ ಇನ್ನಿತರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇಬ್ಬರು ಆರೋಪಿಗಳು ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದ ಸಮೀಪ ಕಾರಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಪರಿಶೀಲನೆ ನಡೆಸಿದಾಗ ಬೇಟೆಗೆ ಹೊಂಚು ಹಾಕುತ್ತಿರುವುದು ಬಯಲಿಗೆ ಬಂದಿದೆ.
ಕಬಿನಿ ಹಿನ್ನೀರಿನಲ್ಲಿ ಹುಲಿಯ ವಿಹಾರ
ಮೈಸೂರು,ಏ.5- ಬಿಸಿಲಿನ ಝಳಕ್ಕೆ ಕಾಡುಪ್ರಾಣಿಗಳು ಬಸವಳಿದಿದ್ದು ಎಚ್ ಡಿ ಕೋಟೆಯ ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ನೀರಿನಲ್ಲಿ ವಿಶ್ರಮಿಸುತ್ತಿರುವ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.
ಬಿಸಿಲಿನ ತಾಪಕ್ಕೆ ಕಾಡುಪ್ರಾಣಿಗಳ ದೇಹದ ಉಷ್ಣತೆ ಹೆಚ್ಚಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರಿನ ಕೊರತೆಯೂ ಕೂಡ ಕಾಡಿನಲ್ಲಿ ಎದುರಾಗಿದ್ದು, ನೀರಿನ ಮೂಲಕ್ಕಾಗಿ ಹಾತೊರೆಯುತ್ತಿವೆ.
ಕಾಡಿನಲ್ಲಿರುವ ಸಣ್ಣಪುಟ್ಟ ಕೆರೆಕಟ್ಟೆಗಳಲ್ಲಿ ನೀರನ್ನು ಕುಡಿಯುತ್ತಾ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿವೆ. ಜೊತೆಗೆ ಈಜಾಡುತ್ತಾ ದೇಹದ ಉಷ್ಣತೆಯನ್ನು ಕೂಡಾ ಕಡಿಮೆ ಮಾಡಿಕೊಳ್ಳುತ್ತಿವೆ.
ಬೃಹತ್ ಗಾತ್ರದ ಹುಲಿಯೊಂದು ಕಬಿನಿ ಹಿನ್ನೀರಿನಲ್ಲಿ ವಿಶ್ರಮಿಸುತ್ತಿರುವ ದೃಶ್ಯ ಸಫಾರಿಗೆ ತೆರಳುತ್ತಿದ್ದ ಪ್ರವಾಸಿಗರೊಬ್ಬರು ತಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.
