ಚಿಕ್ಕಮಗಳೂರು,ಏ.15-ಬಿಳೇಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ಹೋಗುತ್ತಿದ್ದಾಗ ಏಕಾಏಕಿ ಕಾರು ನುಗ್ಗಿದ ಪರಿಣಾಮ ಬಾಲಕಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಅಂಬೇಡ್ಕರ್ ಜಯಂತಿ ಪ್ರಯುಕ್ತ ಗ್ರಾಮದಲ್ಲಿ ಸಂಭ್ರಮದಿಂದ ಮೆರವಣಿಗೆ ಸಾಗುತ್ತಿದ್ದಾಗ, ಮದ್ಯದ ಅಮಲಿನಲ್ಲಿದ್ದ ಸುಧಾಕರ್ ಎಂಬಾತ ಜನಸಂದಣಿಯ ಮೇಲೆ ಕಾರು ಚಲಾಯಿಸಿದ್ದಾನೆ.
ಈ ಭೀಕರ ಅಪಘಾತದಲ್ಲಿ ಸಾನ್ವಿ (7 ) ಎಂಬ ಬಾಲಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ , ಅಪಘಾತದಲ್ಲಿ ನಿಶ್ಚಿತ್ , ತೃಪ್ತಿ, ತಿಮರಾಜು, ಉಷಾ, ಚೇತನ್, ಸೃಷ್ಠಿ ಹಾಗೂ ನಾಗರಾಜ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು, ಚಾಲಕ ಸುಧಾಕರ್‌ನನ್ನು ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಆಕ್ರೋಶಿತ ಗ್ರಾಮಸ್ಥರು ಕಾರಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಚಾಲಕನಿಗೆ ಚಿಕಿತ್ಸೆ ನೀಡುವುದಕ್ಕಿಂತ ಗಾಯಾಳುಗಳ ಜೀವ ಉಳಿಸಲು ಗಮನಹರಿಸಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಎಎಸ್ಪಿ ಜಯಕುಮಾರ್ ಭೇಟಿ ನೀಡಿ, ಆಕ್ರೋಶಿತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
