ಬೆಂಗಳೂರು, ಏ.15- ಚಿನ್ನ ಮತ್ತು ಬೆಳ್ಳಿದರಗಳು ಮತ್ತೆ ಏರುಗತಿಯಲ್ಲಿ ಸಾಗುತ್ತಿದ್ದು, ಪ್ರತಿ ಕೆ.ಜಿ.ಬೆಳ್ಳಿಗೆ ಇಂದು 15 ಸಾವಿರ ರೂ.ನಷ್ಟು ಏರಿಕೆಯಾಗಿದೆ. ಪ್ರತಿ ಕೆ.ಜಿ.ಬೆಳ್ಳಿ ದರ ಇಂದು 2.55 ಲಕ್ಷ ರೂ.ನಿಂದ 2.70 ಲಕ್ಷ ರೂ.ಗೆ ಹೆಚ್ಚಳವಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಏಪ್ರಿಲ್ 10ರಿಂದ ಸ್ಥಿರವಾಗಿದ್ದ ಬೆಳ್ಳಿ ದರವು ಏ.13ರಂದು ಪ್ರತಿ ಕೆ.ಜಿ.ಗೆ ಐದು ಸಾವಿರ ರೂ. ಇಳಿಕೆಯಾಗಿತ್ತು. ನಿನ್ನೆ ಸ್ಥಿರವಾಗಿದ ಬೆಳ್ಳಿ ದರವು ಇಂದು ದಿಢೀರನೆ ಕೆ.ಜಿ.ಗೆ 15 ಸಾವಿರ ರೂ. ಏರಿಕೆಯಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧದ ನಂತರ ಬೆಳ್ಳಿ ಭಾರಿ ಪ್ರಮಾಣದಲ್ಲಿ ಇಂದು ಏರಿಕೆ ಕಂಡಿದೆ.
ಅದೇ ರೀತಿ ಚಿನ್ನದ ದರವು ನಿನ್ನೆಯಿಂದ ಏರುಗತಿಯಲ್ಲಿ ಸಾಗಿದೆ. ಕಳೆದ ವಾರ ಏರಿಳಿತ ಕಂಡಿದದ್ದ ಚಿನ್ನವು ಈಗ ನಿರಂತರ ಏರಿಕೆಯಾಗುತ್ತಿರುವುದು ಆಭರಣಪ್ರಿಯರಲ್ಲಿ ಆತಂಕವನ್ನುಂಟು ಮಾಡಿದೆ.
ಏ.12ರಂದು ಸ್ಥಿರವಾಗಿದ್ದ ಚಿನ್ನವು ಏ.13ರಂದು ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ನಿನ್ನೆಯಿಂದ ಮತ್ತೆ ಏರಿಕೆಯಾಗುತ್ತಿದೆ. 24 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ ನಿನ್ನೆ 147 ರೂ. ಹಾಗೂ ಇಂದು 142 ರೂ. ಏರಿಕೆಯಾಗಿದ್ದು, 15,535 ರೂ.ಗೆ ತಲುಪಿದೆ.
ಹಾಗೆಯೇ 22 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ ನಿನ್ನೆ 135 ರೂ. ಹಾಗೂ ಇಂದು 130 ರೂ. ನಷ್ಟು ಏರಿಕೆಯಾಗಿದೆ. ಪ್ರಸ್ತುತ 14,240 ರೂ.ಗೆ ಒಂದು ಗ್ರಾಂ ಚಿನ್ನ ತಲುಪಿದೆ. 18 ಕ್ಯಾರೆಟ್ ಆಭರಣ ಚಿನ್ನವೂ ಗ್ರಾಂಗೆ 106 ರೂ. ನಷ್ಟು ಹೆಚ್ಚಳವಾಗಿದ್ದು,11,651ರೂ.ಗೆ ತಲುಪಿದೆ. ಆದರೆ, ಪ್ಲಾಟಿನಂ ದರ ಸ್ಥಿರವಾಗಿದೆ.
ಅಮೇರಿಕಾ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆ ಕಂಡುಬಂದಿದೆ. ಮೊದಲ ಸುತ್ತಿನ ಮಾತುಕತೆ ಉಭಯ ರಾಷ್ಟ್ರಗಳ ನಡುವೆ ಮುರಿದು ಬಿದ್ದ ಹಿನ್ನಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತ ಕಂಡುಬಂದಿತ್ತು. ಯುದ್ಧ ನಿಲ್ಲಿಸುವ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ವಿಚಾರಗಳು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿನಿವಾರಪೇಟೆ ಚೇತರಿಕೆ ಕಂಡಿದೆ. ಮತ್ತೆ ಯುದ್ಧ ಪ್ರಾರಂಭವಾದರೆ ಕುಸಿತವಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
