Thursday, April 16, 2026
Homeರಾಜಕೀಯರಾಜ್ಯದ 4 ಪ್ರಮುಖ ನಾಯಕರಿಗೆ ಅಗ್ನಿಪರೀಕ್ಷೆಯಾದ ಉಪಚುನಾವಣೆ

ರಾಜ್ಯದ 4 ಪ್ರಮುಖ ನಾಯಕರಿಗೆ ಅಗ್ನಿಪರೀಕ್ಷೆಯಾದ ಉಪಚುನಾವಣೆ

By-elections a test for 4 prominent leaders of the state

ಬೆಂಗಳೂರು,ಏ.5- ದೇಶದಲ್ಲೇ ಅತ್ಯಂತ ಹಿರಿಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಮತ್ತು ಎಚ್‌.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ, ಏಪ್ರಿಲ್‌ 9ರಂದು ನಡೆಯಲಿದ್ದು, ಕಾಂಗ್ರೆಸ್‌‍-ಬಿಜೆಪಿ ನಾಯಕರಿಗೆ ಈ ಎರಡು ಕ್ಷೇತ್ರಗಳ ಚುನಾವಣೆ ಪ್ರತಿಷ್ಠೆ , ಸವಾಲಿನ ಪ್ರಶ್ನೆಯಾಗಿದೆ.

ಕಾಂಗ್ರೆಸ್ಸಿನಲ್ಲಿ ಈ ಉಪಚುನಾವಣೆ ಕೊಂಚ ಗೊಂದಲಕ್ಕೆ ಕಾರಣವಾಗಿದ್ದು ಟಿಕೆಟ್‌ ಹಂಚಿಕೆಯ ವಿಚಾರದಲ್ಲಿ. ಯಾಕೆಂದರೆ ಬಾಗಲಕೋಟೆಯಲ್ಲಿ ಮೇಟಿ ಅವರ ಮಕ್ಕಳೇ, ಟಿಕೆಟ್‌ಗಾಗಿ ಫೈಟ್‌ ಮಾಡುತ್ತಿದ್ದರು. ಇನ್ನೊಂದು ಕಡೆ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ಕೊಡಬೇಕೆಂದು ದೊಡ್ಡ ಡ್ರಾಮಾವೇ ನಡೆದು ಹೋಯಿತು. ಕೊನೆಗೆ ಎರಡೂ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ ಆಯಾಯ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಲಾಯಿತು. ಪ್ರಮುಖವಾಗಿ,ನಾಲ್ವರು ನಾಯಕರಿಗೆ ಈ ಉಪಚುನಾವಣೆಯ ಫಲಿತಾಂಶ ನಿರ್ಣಾಯಕವಾಗಲಿದೆ.

ಮುಖ್ಯಮಂತ್ರಿಗೂ ಗೆಲುವು ಮುಖ್ಯ?
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದು ಮೂರು ವರ್ಷವಾಗಲು ಇನ್ನೇನು ಕೆಲವು ದಿನಗಳು ಬಾಕಿಯಿದೆ. ಮುಡಾ, ವಾಲೀಕಿ ನಿಗಮದ ಹಗರಣಗಳು ದೇಶದಲ್ಲಿ ದೊಡ್ಡ ಸುದ್ದಿಯನ್ನು ಮಾಡಿತ್ತು. ಇವೆಲ್ಲದರ ನಡುವೆ ಪಂಚ ಗ್ಯಾರಂಟಿಯ ಬಗ್ಗೆ ಮತದಾರರಲ್ಲಿ ಇರುವ ಅಭಿಪ್ರಾಯವನ್ನು ಅಳೆಯುವ ಮಾಪಕವಾಗಿ ಈ ಉಪಚುನಾವಣೆಯ ಫಲಿತಾಂಶ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಜೊತೆಗೆ ಫಲಿತಾಂಶ ಪರವಾಗಿ ಬಂದರೆ ಬಿಜೆಪಿಯವರ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುವ ಆರೋಪಕ್ಕೂ ಉತ್ತರ ಸಿಕ್ಕಂತಾಗುತ್ತದೆ. ಉಪಚುನಾವಣೆಯ ಫಲಿತಾಂಶ ಪೂರಕವಾಗಿ ಬಂದಿದ್ದೇ ಆದಲ್ಲಿ, ಇದು ಸಿದ್ದರಾಮಯ್ಯನವರ ಆಡಳಿತಕ್ಕೆ ಜನರು ಕೊಟ್ಟ ಸರ್ಟಿಫಿಕೇಟ್‌ ಎಂದು ಕಾಂಗ್ರೆಸ್‌‍ ಹೇಳಬಹುದು. ಹಾಗಾಗಿ ಪ್ರಮುಖವಾಗಿ ನಾಲ್ವರಿಗೆ ಈ ಉಪಚುನಾವಣೆಯ ಫಲಿತಾಂಶ ನಿರ್ಣಾಯಕವಾಗಲಿದೆ.

ಬಿ.ವೈ.ವಿಜಯೇಂದ್ರಗೂ ಗೆಲುವು ಮುಖ್ಯ
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಬಾಕಿ ಉಳಿದಿರುವ ರಾಜ್ಯಗಳಿಗೆ ಬಿಜೆಪಿಯ ವರಿಷ್ಠರು ರಾಜ್ಯಾಧ್ಯಕ್ಷರನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ರಾಜ್ಯಾಧ್ಯಕ್ಷರಾದ ಮೇಲೆ ವಿಜಯೇಂದ್ರ ಎದುರಿಸುತ್ತಿರುವ ಬಹುದೊಡ್ಡ ಸವಾಲು ಇದಾಗಿದೆ.
ರಾಜ್ಯ ಬಿಜೆಪಿಯಲ್ಲಿರುವ ಗುಂಪುಗಾರಿಕೆ, ಹಿರಿಯರ ತಟಸ್ಥ ಧೋರಣೆಯ ನಡುವೆಯೂ, ಎರಡೂ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿದ್ದೇ ಆದಲ್ಲಿ, ಅವರ ಅಧ್ಯಕ್ಷ ಹುದ್ದೆಯ ಕುರ್ಚಿ ಗಟ್ಟಿಯಾಗಲಿದೆ. ಇಲ್ಲದಿದ್ದರೆ, ಅವರ ಕುರ್ಚಿಗೆ ಸಂಚಕಾರ ಬಂದರೂ ಬರಬಹುದು. ಈಗಲೇ, ಬಿಜೆಪಿಯ ಕೆಲವು ನಾಯಕರು, , ಉಪಚುನಾವಣೆಯ ಫಲಿತಾಂಶದ ಮೇಲೆ ವಿಜಯೇಂದ್ರ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಯಲ್ಲಿ ಇದ್ದಂತೆಯೇ, ಕಾಂಗ್ರೆಸ್ಸಿನಲ್ಲಿ ಐದು ರಾಜ್ಯಗಳ ಚುನಾವಣೆ ಮುಗಿದ ನಂತರ, ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನಲೆಗೆ ಬಂದರೂ ಬರಬಹುದು. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್‌, ಅವರಿಗೆ ರಾಜ್ಯದಲ್ಲಿನ ಉಪಚುನಾವಣೆಯಲ್ಲಿ ತಮ ಸಂಘಟನಾ ಶಕ್ತಿ ಪ್ರದರ್ಶಿಸಲು ವೇದಿಕೆಯಾಗಬಹುದು. ಎರಡು ಕ್ಷೇತ್ರಗಳಲ್ಲಿನ ಜಯ, ಅವರಿಗೆ ರಾಜ್ಯದಲ್ಲಿ ಮುಂದಿನ ರಾಜಕೀಯ ನಡೆಗೆ ಮೆಟ್ಟಿಲಾಗಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಶಾಮನೂರು ಕುಟುಂಬ ಮತ್ತು ದಾವಣಗೆರೆ ಫಲಿತಾಂಶ
ಲಿಂಗಾಯತ ಸಮುದಾಯದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪನವರ ನಿಧನದಿಂದ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಅವರ ಮೊಮಗ ಸಮರ್ಥ್‌ ಶಾಮನೂರು ಅವರಿಗೆ ಕಾಂಗ್ರೆಸ್‌‍ ಟಿಕೆಟ್‌ ಲಭಿಸಿದೆ. ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಅವರು, ಟಿಕೆಟಿಗಾಗಿ ಭಾರೀ ಫೈಟ್‌ ಮಾಡಬೇಕಾಗಿ ಬಂತು. ಸಮರ್ಥ್‌ ಅವರ ತಾಯಿ, ಸಂಸದೆಯೂ ಆಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ, ದೆಹಲಿ ಮಟ್ಟದಲ್ಲಿ ಲಾಬಿಯನ್ನೂ ನಡೆಸಿದ್ದರು.

ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್‌ ಕೊಡಬೇಕು ಎನ್ನುವ ಕೂಗು, ದೊಡ್ಡ ಮಟ್ಟದಲ್ಲಿ ಕೇಳಿ ಬಂದಿದ್ದರಿಂದ, ಸಮುದಾಯದ ಸಾದಿಕ್‌ ಪೈಲ್ವಾನ್‌, ನಾಮಪತ್ರವನ್ನು ಸಲ್ಲಿಸಿಯೂ ಬಿಟ್ಟಿದ್ದರು. ಕೊನೆಗೆ ಮಲ್ಲಿಕಾರ್ಜುನ್‌ ತಮ ಪುತ್ರನಿಗೆ, ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಈಗ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಇವರಿಗೆ ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ವಿರೋಧದ ನಡುವೆಯೂ ತಮ ಪುತ್ರನಿಗೆ ಟಿಕೆಟ್‌ ತಂದಿರುವ ಮಲ್ಲಿಕಾರ್ಜುನ್‌ಗೆ ಜಿಲ್ಲೆಯಲ್ಲಿನ ಹಿಡಿತ, ಮುಂದಿನ ಅಧಿಕಾರಕ್ಕೆ, ಗೆಲುವು ಬಹಳ ಮುಖ್ಯವಾಗಲಿದೆ.

RELATED ARTICLES

Latest News