ಕಣ್ಣೂರು,ಏ.5- ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ ಒಳಒಪ್ಪಂದ ಆಗಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.ಕೇರಳ ಪ್ರವಾಸದಲ್ಲಿರುವ ಅವರು, ಸುದ್ದಿಗಾರ ರೊಂದಿಗೆ ಮಾತನಾಡಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಒಳ ಒಪ್ಪಂದವಾಗಿದೆ ಎಂದು ಹೇಳುತ್ತಿದ್ದಾರೆ, ಆದರೆ ಆ ರೀತಿ ಆಗಲು ಸಾಧ್ಯವಿಲ್ಲ. ಈ ಹಿಂದೆ ಕೇರಳದ ಜನ, ರಾಹುಲ್ ಗಾಂಧಿ ಅವರನ್ನು ಭರ್ಜರಿ ಬಹುಮತದಿಂದ ಸಂಸತ್‌ಗೆ ಆಯ್ಕೆ ಮಾಡಿದ್ದರು. ಆದರೆ ಬಿಜೆಪಿಯವರು ದುರುದ್ದೇಶ ಪೂರ್ವಕವಾಗಿ ರಾಹುಲ್‌ಗಾಂಧಿ ಅವರ ವಿರುದ್ಧ ದ್ವೇಷ ರಾಜಕಾರಣ ಮಾಡಿ, ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದರು. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್, ಬಿಜೆಪಿ ನಡುವೆ ಹೊಂದಾಣಿಕೆ ಇದೆ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪಿಣರಾಯ್ ವಿಜಯನ್ ಅವರು ಕಳೆದ 10 ವರ್ಷಗಳಿಂದಲೂ ಕೇರಳದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ತಮ ಲೋಪವನ್ನು ಮರೆಮಾಚಿಕೊಳ್ಳಲು ಈ ರೀತಿಯ ಅನಗತ್ಯ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ದೂರಿದರು.
ಕೇರಳ ರಾಜ್ಯದ ಮೂಲ ಭೂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಶಬರಿಮಲೆಯಲ್ಲಿನ ಚಿನ್ನದ ಕಳ್ಳತನ ಗಂಭೀರ ಸಮಸ್ಯೆ. ಆದರೆ ಅದನ್ನು ಕೇಂದ್ರದ ಬಿಜೆಪಿಯೂ ತನಿಖೆ ಮಾಡಲಿಲ್ಲ, ಕೇರಳದ ಪೊಲೀಸರೂ ಸರಿಯಾದ ತನಿಖೆ ನಡೆಸಲಿಲ್ಲ. ಕೇಂದ್ರ ಸರ್ಕಾರ ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ತಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಮಾತ್ರ ಬಳಕೆ ಮಾಡುತ್ತಿದೆ. ಚಿನ್ನ ಕಳ್ಳತನದಂತಹ ಗಂಭೀರ ಪ್ರಕರಣಗಳನ್ನು ತನಿಖೆ ಮಾಡಲು ಬಳಸಲಿಲ್ಲ ಎಂದು ದೂರಿದರು.
ಅಭಿವೃದ್ಧಿಯನ್ನು ಮರೆಮಾಚಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಕೇರಳದಲ್ಲಿ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಪರಿಣಾಮದಿಂದ 25 ಲಕ್ಷ ಜನ ಭಾರತಕ್ಕೆ ಮರಳುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವುದು ದೊಡ್ಡ ಸವಾಲು. ಸ್ಥಳೀಯ ಸರ್ಕಾರ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಎಲ್‌ಡಿಎಫ್ ಸರ್ಕಾರ 10 ವರ್ಷಗಳಿಂದ ಲೂಟಿ ಮಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಇದಕ್ಕಾಗಿ ಜನ ಬದಲಾವಣೆ ಬಯಸಿದ್ದಾರೆ. ಮೂರನೇ ಎರಡರಷ್ಟು ಬಹುಮತದೊಂದಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರಳಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಕೇರಳದಲ್ಲೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದೆ, ಜನರಿಗೆ ಅನುಕೂಲವಾಗಲಿದೆ ಎಂದರು.
