ಬೆಂಗಳೂರು, ಏ.6- ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹಸಿ ತ್ಯಾಜ್ಯದಿಂದ ಎಲ್ಪಿಜಿ ಸಿಲಿಂಡರ್ಗಳ ಅವಶ್ಯಕತೆಯೇ ಇಲ್ಲದಂತೆ ಮಾಡಬಹುದಾಗಿರುವ ಪರಿಸರ ಸ್ನೇಹಿ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲೇ ಪ್ರತಿನಿತ್ಯ ಒಂದು ಸಾವಿರ ಟನ್ ಗಿಂತಲೂ ಹೆಚ್ಚು ಪ್ರಮಾಣದ ಹಸಿ ತ್ಯಾಜ್ಯವು ಸಂಗ್ರಹವಾಗುತ್ತಿದೆ. ಈ ಪ್ರಮಾಣದ ಹಸಿ ತ್ಯಾಜ್ಯದಿಂದ ಪ್ರತೀ ನಿತ್ಯ ಕನಿಷ್ಠ 20 ಲೀಟರ್ ಸಾಮರ್ಥ್ಯದ ಸುಮಾರು 14 ಲಕ್ಷ ಸಿಲಿಂಡರ್ ಗಳಿಗಾಗುವಷ್ಟು ಮೀಥೇನ್ ಅನಿಲವನ್ನು ಉತ್ಪಾದಿಸಬಹುದಾಗಿರುತ್ತದೆ.
ವಾಸ್ತವವಾಗಿ ನಮಗೆ ಅವಶ್ಯಕತೆ ಇರುವ ಅನಿಲ ಪೂರೈಕೆಗೆ ಬೇರೆ ದೇಶಗಳನ್ನು ಅವಲಂಭಿಸದೇ ನಮ್ಮಲ್ಲಿಯೇ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಿಂದಲೇ ನಮಗೆ ಅವಶ್ಯಕತೆ ಇರುವಷ್ಟು ಪ್ರಮಾಣದ ಮೀಥೇನ್ ಅನಿಲವನ್ನು ಪ್ರತೀ ನಿತ್ಯವು ಉತ್ಪಾದಿಸಬಹುದಾಗಿರುತ್ತದೆ. ನಮ ಯಡಿಯೂರು ವಾರ್ಡ್ನಲ್ಲಿ ಪ್ರತೀ ನಿತ್ಯ ಉತ್ಪತ್ತಿಯಾಗುವ 5 ಟನ್ ಪ್ರಮಾಣದ ಹಸಿ ತ್ಯಾಜ್ಯದಿಂದ ಪ್ರತೀ ನಿತ್ಯ 3,000 ಕಿ.ವ್ಯಾ ವಿದ್ಯುತ್ ಚ್ಛಕ್ತಿಯನ್ನು ಉತ್ಪಾದಿಸಲಾಗುತ್ತಿದೆ.
ಮಾತ್ರವಲ್ಲ ಅದರಿಂದ 4,500 ಲೀಟರ್ ಗಳಷ್ಟು ಪ್ರಮಾಣದಲ್ಲಿ ಮೀಥೇನ್ ಅನಿಲವನ್ನು ಉತ್ಪಾದಿಸಲಾಗುತ್ತಿದೆ. ಅದರಂತೆ, 20 ಲೀಟರ್ ಸಾಮರ್ಥ್ಯದ 225 ಸಿಲಿಂಡರ್ ಗಳಲ್ಲಿ 4,500 ಲೀಟರ್ ಗಳಷ್ಟು ಪ್ರಮಾಣದ ಮೀಥೇನ್ ಅನ್ನು ತುಂಬಿಸಬಹುದಾಗಿದ್ದು, ಪ್ರತೀ ತಿಂಗಳೊಂದಕ್ಕೆ ಕನಿಷ್ಠ 6,750 ಸಿಲಿಂಡರ್ ಗಳಲ್ಲಿ ಈ ಮೀಥೇನ್ ಅನ್ನು ತುಂಬಿಸಿ ನಾಗರಿಕರಿಗೆ ಪೂರೈಕೆ ಮಾಡಬಹುದಾಗಿರುತ್ತದೆ.
ಇದೇ ಮಾದರಿಯಲ್ಲಿ, ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ 198 ವಾರ್ಡ್ ಗಳ ವ್ಯಾಪ್ತಿಯಲ್ಲಿ ಗರಿಷ್ಠ 2,400 ಚ. ಅಡಿಗಳಷ್ಟು ವಿಸ್ತೀರ್ಣದ ಸರ್ಕಾರಿ ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಿ ಆಯಾ ವಾರ್ಡ್ ಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಮೀಥೇನ್ ಅನಿಲವನ್ನಾಗಿ ಪರಿವರ್ತಿಸಿದ್ದೇ ಆದಲ್ಲಿ, ಪ್ರತೀ ತಿಂಗಳೊಂದಕ್ಕೆ ತಲಾ 20 ಲೀಟರ್ ಸಾಮರ್ಥ್ಯದ ಕನಿಷ್ಠ 14 ಲಕ್ಷ ಸಿಲಿಂಡರ್ ಗಳಲ್ಲಿ ಮೀಥೇನ್ ಅನಿಲವನ್ನು ತುಂಬಿಸಲು ಸಾಧ್ಯವಿರುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ಈ ರೀತಿ ಪರಿಸರಕ್ಕೆ ಪೂರಕವಾದ ಯೋಜನೆಯನ್ನು ಪರಿಣಾಮಕಾರಿಯಾಗಿ ಸಿದ್ಧರಾಮಯ್ಯನವರ ಸರ್ಕಾರವು ಅನುಷ್ಠಾನಗೊಳಿಸಿದ್ದೇ ಆದಲ್ಲಿ, ಕೇವಲ ಬೆಂಗಳೂರು ಮಹಾನಗರದಲ್ಲಿ ಮಾತ್ರವೇ ಪ್ರತೀ ತಿಂಗಳು 14 ಲಕ್ಷ ಕುಟುಂಬಗಳಿಗೆ ಸಿಲಿಂಡರ್ ಗಳಿಗೆ ತಗುಲುವ ಶೇ. 50% ರಷ್ಟು ಪ್ರಮಾಣದಲ್ಲಿಯೇ ಬೆಂಗಳೂರು ನಾಗರಿಕರಿಗೆ ಯಶಸ್ವಿಯಾಗಿ ತಲುಪಿಸುವ ಮೂಲಕ ಬೆಂಗಳೂರು ಮಹಾನಗರವನ್ನು ಅನಿಲ ಮುಕ್ತ ನಗರವನ್ನಾಗಿ ಮಾಡಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದೇ ರೀತಿ ರಾಜ್ಯದಲ್ಲಿರುವ 12 ಮಹಾನಗರಗಳಲ್ಲಿ ಪ್ರತೀ ನಿತ್ಯ ಸಂಗ್ರಹವಾಗುವ ಹಸಿ ತ್ಯಾಜ್ಯದಿಂದ ಬೆಂಗಳೂರು ಮಹಾನಗರವನ್ನು ಹೊರತುಪಡಿಸಿ ತಲಾ 20 ಕೆ. ಜಿ. ಸಾಮರ್ಥ್ಯದ ಕನಿಷ್ಠ 20 ಲಕ್ಷ ಮೀಥೇನ್ ಅನಿಲವನ್ನು ತುಂಬಿದ ಸಿಲಿಂಡರ್ ಗಳನ್ನು ತಯಾರಿಸಲು ಅವಕಾಶವಿದ್ದು, ಆ ಮೂಲಕ ಬೆಂಗಳೂರು ಮಹಾನಗರವನ್ನು ಹೊರತುಪಡಿಸಿ ಇನ್ನುಳಿದ ರಾಜ್ಯದ 20 ಲಕ್ಷ ಮನೆಗಳನ್ನು ಅನಿಲ ಮುಕ್ತ ನಗರಗಳನ್ನಾಗಿ ಮಾಡಲು ಅವಕಾಶವಿರುತ್ತದೆ.
ಕೇವಲ 75 ಲಕ್ಷದಿಂದ ಒಂದು ಕೋಟಿ ರೂಪಾಯಿ ವೆಚ್ಛದೊಳಗೆ ತಲಾ 05 ರಿಂದ 10 ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕಗಳನ್ನು ನಿರ್ಮಿಸಬಹುದಾಗಿದ್ದು, 200 ಕೋಟಿ ರೂಪಾಯಿಗಳಷ್ಟು ಪ್ರಮಾಣದ ಅನುದಾನದಿಂದ ಬೆಂಗಳೂರಿನ ಹಳೆಯ 198 ವಾರ್ಡ್ ಗಳಲ್ಲಿ 198 ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಬಹುದಾಗಿರುತ್ತದೆ ಎಂದು ಸಲಹೆ ನೀಡಿದ್ದಾರೆ.
