ಮಂಡ್ಯ,ಏ.6- ಪುಂಡರ ನಡುವೆ ನಡೆದ ಕಾಳಗದಲ್ಲಿ ರೌಡಿ ಶೀಟರ್ ಹತ್ಯೆಯಾಗಿರುವ ಘಟನೆ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನ ಸಮೀಪ ನಡೆದಿದೆ. ತಡ ರಾತ್ರಿ ಈ ಘಟನೆ ನಡೆದಿದ್ದು ರೌಡಿ ಶೀಟರ್ ಯಶ್ವಂತ್ ಅಲಿಯಾಸ್ ಕಜ್ಜಿ ಅಭಿ ಭೀಕರವಾಗಿ ಕೊಲೆಯಾಗಿದ್ದಾನೆ.
ಮದ್ದೂರು ಪಟ್ಟಣದ ಹೊಳೆ ಆಂಜನೇಯ ದೇಗುಲ ರಸ್ತೆಯಲ್ಲಿರುವ ಪಟೇಲ್ ಸಾಮಿಲ್ ಬಳಿ ಜಮಾಯಿಸಿದ್ದ ತಂಡಗಳ ನಡುವೆ ಮೊದಲು ಮಾತಿನ ಚಕಮಕಿ ನಡೆದು ನಂತರ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿದೆ.ಇದರಲ್ಲಿ ರೌಡಿಶೀಟರ್ ಯಶ್ವಂತ್, ಸಚಿನ್, ಗೊರವನಹಳ್ಳಿ ಗ್ರಾಮದ ದರ್ಶನ್ ಎಂಬುವವರು ಗಂಭೀರ ಗಾಯಗೊಂಡಿದ್ದರು ಆದರೆ ಯಶ್ವಂತ್ ಮೃತಪಟ್ಟಿದ್ದಾನೆ.
ಇನ್ನು ಸಚಿನ್ ಮತ್ತು ದರ್ಶನ್ ಮಂಡ್ಯದ ಮಿಮ್ಸೌನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಬಳಿಕ ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದ್ದೂರಿನ ಮರಳಿಗ ಗ್ರಾಮದ ಯಶ್ವಂತ್ ಅಲಿಯಾಸ್ ಕಜ್ಜಿ ಅಭಿ ಮೇಲೆ ಹಲವಾರು ಅಪರಾಧ ಪ್ರಕರಣಗಳಿದ್ದು ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಸ್ಥಳೀಯರು ಈ ಘಟನೆ ಯಿಂದ ಬೆಚ್ಚಿಬಿದ್ದಿದ್ದಾರೆ.
ಮೊದಲು ಮದ್ದೂರಿನಲ್ಲಿ ಸಿಗರೇಟ್ ಕೊಳ್ಳುವ ವಿಚಾರದಲ್ಲಿ ಗೊರವನಹಳ್ಳಿ ಹುಡುಗರೊಂದಿಗೆ ರೌಡಿ ಯಶ್ವಂತ್‌ನ ಸಹಚರಿಗಳು ಗಲಾಟೆ ಮಾಡಿಕೊಂಡಿದ್ದರು. ನಂತರ ರಾತ್ರಿ ಯಶ್ವಂತ್ ಮತ್ತು ಗೊರವನಹಳ್ಳಿ ತಂಡದ ಕೆಲ ಹುಡುಗರು ರಾಜಿ ಪಂಚಾಯಿತಿಗಾಗಿ ಸಾಮಿಲ್ ಬಳಿ ಸೇರಿಕೊಂಡಿದ್ದಾರೆ.
ಅಲ್ಲೂ ಕೂಡ ಮಾತಿನ ಚಕಮಕಿ ನಡೆದಿದ್ದು, ಕೆಲವರು ಮಾರಕಾಸ್ತ್ರಗಳನ್ನು ತೋರಿಸಿ ಧಮ್ಕಿ ಹಾಕಿದ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಮರದ ತುಂಡುಗಳಿಂದ ಯಶ್ವಂತ್ ಸೇರಿದಂತೆ ಅವರ ಜೊತಗೆ ಬಂದಿದ್ದವರನ್ನು ಥಳಿಸಲಾಗಿದೆ ಎಂದು ಗೊತ್ತಾಗಿದೆ.
ಪರಿಸ್ಥಿತಿ ತಹಬಂದಿಗೆ ಬಂದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
