Thursday, April 16, 2026
Homeರಾಜ್ಯದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ : ಬಹಿರಂಗ ಪ್ರಚಾರಕ್ಕೆ ತೆರೆ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ : ಬಹಿರಂಗ ಪ್ರಚಾರಕ್ಕೆ ತೆರೆ

Davangere Dakshina, Bagalkote by-elections: Open for campaigning

ಬೆಂಗಳೂರು,ಏ.7- ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದ್ದು, ಗುರುವಾರ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.

ಬಿಜೆಪಿ ಹಾಗೂ ಕಾಂಗ್ರೆಸ್‌‍ ಪಕ್ಷದಿಂದ ರಾಜ್ಯ ಮಟ್ಟದ ನಾಯಕರು ಆಗಮಿಸಿ ಬಿರುಸಿನ ಪ್ರಚಾರ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಯತ್ನ ಮಾಡಿದರು.ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಳೆದ ಎರಡು ವಾರಗಳಿಂದ ನಡೆದ ಘಟಾನುಘಟಿ ನಾಯಕರ ವಾಕ್ಸಮರ, ರೋಡ್‌ ಶೋ ಮತ್ತು ಪಾದಯಾತ್ರೆಗಳಿಗೆ ಇಂದು ಅಂತಿಮ ತೆರೆಬಿದ್ದಿದೆ. ನಾಳೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ.

ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮೇಶ್‌ ಮೇಟಿ ಪರವಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವೀರಣ್ಣ ಚರಂತಿಮಠ ಪರವಾಗಿ, ದಾವಣಗೆರೆ ದಕ್ಷಿಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌‍ ಅಭ್ಯರ್ಥಿ ಎಸ್‌‍.ಎಸ್‌‍ ಸಮರ್ಥ್‌ ಪರವಾಗಿ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಅವರ ಪರ ಮಾಜಿ ಸಿ.ಎಂ ಬಿ.ಎಸ್‌‍ ಯಡಿಯೂರಪ್ಪ ಸೇರಿದಂತೆ ಅನೇಕರು ರೋಡ್‌ ಶೋ ಮೂಲಕ ಪ್ರಚಾರ ನಡೆಸಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರುವ ಕಾರಣ ನಾಳೆ ಮಾತ್ರ ಅಭ್ಯರ್ಥಿ ಸೇರಿದಂತೆ 5 ಮಂದಿ ಮಾತ್ರ ಮನೆ ಮನೆಗೆ ತೆರಳಿ ಮಾತ ಯಾಚಿಸಲಿದ್ದಾರೆ.

ಮತದಾರರನ್ನು ಹೊರತುಪಡಿಸಿ ಉಳಿದವರು, ಕ್ಷೇತ್ರ ಬಿಟ್ಟು ತೆರಳಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಕ್ಷೇತ್ರದಲ್ಲದವರು ಬಹಿರಂಗ ಪ್ರಚಾರ ಮುಗಿದ ತಕ್ಷಣವೇ ಗಂಟುಮೂಟೆ ಕಟ್ಟಬೇಕು.

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌‍ನ ಭೀಷ ಎಂದೇ ಕರೆಯಲ್ಪಡುತ್ತಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ಹಾಗೂ ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಚ್‌.ವೈ. ಮೇಟಿಯವರ ಅಕಾಲಿಕ ಮರಣದಿಂದ ಈ ಚುನಾವಣೆ ಎದುರಾಗಿದೆ. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್‌‍ ವಶದಲ್ಲಿದ್ದ ಕಾರಣ, ಇವುಗಳನ್ನು ಮರಳಿ ಗೆಲ್ಲುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಾಗಿದೆ.

ದಾವಣಗೆರೆ ದಕ್ಷಿಣ

2008ರ ಕ್ಷೇತ್ರ ಮರುವಿಂಗಡಣೆಯ ನಂತರ ದಾವಣಗೆರೆ ದಕ್ಷಿಣ ಕ್ಷೇತ್ರವು ಸತತವಾಗಿ ಶಾಮನೂರು ಶಿವಶಂಕರಪ್ಪನವರನ್ನು ಕೈಹಿಡಿದಿದೆ. ಕಾಂಗ್ರೆಸ್‌‍ನ ಭದ್ರಕೋಟೆ ಎನಿಸಿಕೊಂಡಿರುವ ಇಲ್ಲಿ ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿದೆ. ಶಾಮನೂರು ಅವರ ಅನುಪಸ್ಥಿತಿಯಲ್ಲಿ ಕ್ಷೇತ್ರದ ಮತದಾರರ ಒಲವು ಯಾರ ಕಡೆಗಿದೆ ಎಂಬುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್‌‍ ನಾಯಕರು ಕಳೆದ ಒಂದು ವಾರದಿಂದ ಇಲ್ಲೇ ಬೀಡುಬಿಟ್ಟು ಮತಬೇಟೆ ನಡೆಸುತ್ತಿದ್ದಾರೆ. ಇನ್ನೂ ಬಿಜೆಪಿಯವರೂ ಅದೇ ಸಾಲಿನಲ್ಲಿದ್ದಾರೆ.

ಬಾಗಲಕೋಟೆಯಲ್ಲಿ ಎಚ್‌.ವೈ. ಮೇಟಿಯವರ ನಿಧನದ ನಂತರ ಅವರ ಪುತ್ರ ಉಮೇಶ್‌ ಮೇಟಿ ಅವರನ್ನು ಕಾಂಗ್ರೆಸ್‌‍ ಕಣಕ್ಕಿಳಿಸಿದೆ. ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿಕೂಟ ಇಲ್ಲಿ ಭರ್ಜರಿ ಕ್ಯಾಂಪೇನ್‌ ನಡೆಸಿದ್ದು, ಕಾಂಗ್ರೆಸ್‌‍ನ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಗುಡುಗಿದೆ. ಸ್ಥಳೀಯ ಅಭಿವೃದ್ಧಿ ವಿಷಯಗಳು ಇಲ್ಲಿ ಚುನಾವಣೆಯ ಪ್ರಮುಖ ಚರ್ಚೆಯ ವಸ್ತುಗಳಾಗಿವೆ.

ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ವೀರಣ್ಣ ಚರಂತಿಮಠ ಅವರು, ಹಿಂದೆ ಬಿಜೆಪಿ ಪಕ್ಷ ಅಭಿವೃದ್ಧಿ ಮಾಡಿರುವ ಬಗ್ಗೆ ಹಾಗೂ ಸರಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಜೊತೆಗೆ ಕಾಂಗ್ರೆಸ್‌‍ ಪಕ್ಷದ ಆಡಳಿತ ವಿರುದ್ಧ ಹೇಳುತ್ತಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಬಿಜೆಪಿ ಪಕ್ಷದ ಪ್ರಚಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಮತ್ತು ಪ್ರಮುಖ ಸಮುದಾಯದ ಮುಖಂಡರನ್ನು ಕರೆಸಿ, ಜಾತಿ ಅನುಸಾರ ಮತಗಳು ಪಡೆಯುವ ಪ್ರಯತ್ನ ಮಾಡಲಾಗಿದೆ.

ಇನ್ನು ಕಾಂಗ್ರೆಸ್‌‍ ಪಕ್ಷದ ಅಭ್ಯರ್ಥಿಯಾಗಿ ಉಮೇಶ್‌ ಮೇಟಿ ಅವರು ಸಹ ತಮದೇ ಆದ ಶೈಲಿಯಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ತಂದೆಯ ನಿಧನದಿಂದಾಗಿ ಅನುಕಂಪ ಪಡೆದುಕೊಳ್ಳುವ ಜೊತೆಗೆ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಲಾಭ, ಬಾಗಲಕೋಟೆ ನಗರಕ್ಕೆ ಸರಕಾರದಿಂದ ಮೆಡಿಕಲ್‌ ಕಾಲೇಜು ಸೇರಿದಂತೆ ಇತರ ಅಭಿವೃದ್ಧಿ ವಿಷಯಗಳನ್ನು ಇಟ್ಟು ಪ್ರಚಾರ ಮಾಡುವ ಮೂಲಕ ಮತದಾರನನ್ನು ಸೆಳೆಯು ಯತ್ನ ಮಾಡಿದ್ದಾರೆ.

ಕಾಂಗ್ರೆಸ್‌‍ ಪಕ್ಷದ ಪರವಾಗಿ ಸಿಎಂ ಆರು ದಿನಗಳ ಕಾಲ ಕ್ಷೇತ್ರದಲ್ಲಿ ಸಂಚಾರ ಮಾಡಿ, ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದರು. ಕಾಂಗ್ರೆಸ್‌‍ ಪಕ್ಷದ ಆಡಳಿತ ಇರುವುದರಿಂದ ಶಾಸಕರಿಗೆ, ಸಚಿವರಿಗೆ ಹಾಗೂ ಕೆಪಿಸಿಸಿ ಮುಖಂಡರಿಗೆ ಬೂತ್‌ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಎರಡೂ ಪಕ್ಷಗಳಿಂದ ಘಟನಾಘಟಿಗಳಿಂದ ತಮದೇ ಆದ ರಣತಂತ್ರ ರೂಪಿಸಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಬಾಗಲಕೋಟೆ ಉಪ ಚುನಾವಣೆ ಕೇವಲ ಹೆಸರಿಗೆ ಮಾತ್ರ, ಅಸಲಿಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆ ಆಗಿದ್ದರೆ, ಬಿಜೆಪಿ ಪಕ್ಷಕ್ಕೂ ಈ ಕ್ಷೇತ್ರ ಪ್ರತಿಷ್ಠೆ ಆಗಿದೆ. ಎರಡೂ ಪಕ್ಷದವರಿಂದ ಸಮಬಲದ ಹೋರಾಟ ನಡೆಯುತ್ತಿದೆ. ಏಪ್ರಿಲ್‌ 9ರಂದು ಮತದಾನ ನಡೆಯಲಿದ್ದು, ಬಿಗಿ ಪೊಲೀಸ್‌‍ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

RELATED ARTICLES

Latest News