ಬೆಂಗಳೂರು, ಮೇ 5- ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶಗಳ ಪೈಕಿ ತಮಿಳುನಾಡು ಮತ್ತು ಪಾಂಡೀಚೆರಿಯಲ್ಲಿನ ಕಾಂಗ್ರೆಸ್ ಸಾಧನೆಯನ್ನು ಗಮನಿಸಿದರೆ ಭವಿಷ್ಯದಲ್ಲಿ ರಾಷ್ಟ್ರೀಯ ಸ್ಥಾನಮಾನ ಕಳೆದುಕೊಳ್ಳುವ ಸನಿಹದಲ್ಲಿರುವಂತೆ ಭಾಸವಾಗುತ್ತಿದೆ.
ಯಾವುದೇ ಪಕ್ಷ ರಾಷ್ಟ್ರೀಯ ಸ್ಥಾನಮಾನವನ್ನು ಗಳಿಸಲು ಅಥವಾ ಉಳಿಸಿಕೊಳ್ಳಲು ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ ಕನಿಷ್ಠ ಶೇ.2ರಷ್ಟು ಕ್ಷೇತ್ರಗಳನ್ನಾದರೂ ಗೆದ್ದಿರಬೇಕು. ವಿಜೇತ ಅಭ್ಯರ್ಥಿಗಳು ಬೇರೆ ಬೇರೆ ರಾಜ್ಯಗಳಿಂದ ಆಯ್ಕೆಯಾಗಿರಬೇಕು ಮತ್ತು ಕಳೆದ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಶೇ.6ರಷ್ಟನ್ನಾದರೂ ಮತ ಗಳಿಸಿರಬೇಕು ಜೊತೆಗೆ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಕಂಡಿರಬೇಕು. ಈ ಮಾನದಂಡಗಳ ಪ್ರಕಾರ ಸದ್ಯಕ್ಕೆ ಕಾಂಗ್ರೆಸ್ಗೆ ರಾಷ್ಟ್ರೀಯ ಸ್ಥಾನಮಾನ ಭದ್ರವಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.21.19
ಮತಗಳನ್ನು ಪಡೆದುಕೊಂಡು, 99 ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಹೀಗಾಗಿ ಸದ್ಯಕ್ಕೆ ರಾಷ್ಟ್ರೀಯ ಸ್ಥಾನಮಾನ ಅಬಾಧಿತವಾಗಿದೆ.140 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ನಿನ್ನೆ ಘೋಷಣೆಯಾದ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ.2.97, ತಮಿಳುನಾಡಿನಲ್ಲಿ ಶೇ.3.37ರಷ್ಟು ಮಾತ್ರ ಮತಗಳಿಸಲು ಸಾಧ್ಯವಾಗಿದೆ.
ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದ ಮೈತ್ರಿಯಿದ್ದರೂ, ದ್ರಾವಿಡ ನಾಡಿನ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಯಾವ ಪಕ್ಷದ ಜೊತೆಗೂ ಮೈತ್ರಿ ಬೇಡ ಎಂದು ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಒಂದೆಡೆ ಮೈತ್ರಿ ವಿಫಲವಾದರೆ ಮತ್ತೊಂದೆಡೆ ಸ್ವಂತ ಬಲದ ಪರೀಕ್ಷೆಯಲ್ಲೂ ಕೈ ಪಡೆ ವಿಫಲವಾಗಿದೆ.
ಅಸ್ಸಾಂನಲ್ಲಿ ಗೆಲ್ಲುವ ಸಾಧ್ಯತೆ ಇದೆ. ಕನಿಷ್ಠ 50 ಸ್ಥಾನಗಳಾದರೂ ಕಾಂಗ್ರೆಸ್ ಪಡೆಯಲಿದೆ ಎಂಬ ಲೆಕ್ಕಾಚಾರಗಳಿದ್ದವು. ಕಳೆದ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆದ್ದಿದ್ದ ಕೈ ಪಡೆದ ಈ ಬಾರಿ ಅದರಲ್ಲೂ ಒಂದು ಸ್ಥಾನವನ್ನು ಕಳೆದುಕೊಂಡು 19ಕ್ಕೆ ತೃಪ್ತಿ ಪಟ್ಟುಕೊಂಡಿದೆ. ಮತಗಳಿಕೆಯಲ್ಲಿ ಶೇ.29.84ರಷ್ಟು ಸಾಧನೆ ಮಾಡಿದೆ. ಆದರೆ ಗೆಲುವಿನ ಪ್ರಮಾಣದಲ್ಲಿ ಎಡವಿದೆ.
ಕೇರಳದಲ್ಲಿ ಎಲ್ಡಿಎಫ್ನ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ಗೆ ನೇತೃತ್ವದ ಮೈತ್ರಿಕೂಟಕ್ಕೆ ನೆರವಾಗಿದೆ. ಆದರೂ ಕಾಂಗ್ರೆಸ್ ಗಳಿಸಿರುವುದು ಶೇ.29.84ರಷ್ಟು ಮತಗಳನ್ನು ಮಾತ್ರ. ಈ ಮೊದಲು ಕಾಂಗ್ರೆಸ್ ಮತ ಬ್ಯಾಂಕ್ ಎಲ್ಲಾ ರಾಜ್ಯಗಳಲ್ಲೂ ಕನಿಷ್ಠ ಶೇ.25ರಷ್ಟು ಎಂಬ ವಿಶ್ವಾಸ ಇತ್ತು. ಉಳಿದ ಶೇ.5ರಷ್ಟು ಮತ ಪಡೆದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರಗಳು ಉಲ್ಟಾ ಆಗುತ್ತಿವೆ. ಅಸ್ತಿತ್ವದಲ್ಲೇ ಇರದಿದ್ದ ಬಿಜೆಪಿ ಕೇರಳದಲ್ಲಿ ಮೂರು ಸ್ಥಾನ ಗೆಲ್ಲುವ ಜೊತೆಗೆ ಶೇ.11.42ರಷ್ಟು ಮತಗಳಿಸಿದೆ.
ಪಾಂಡೀಚೆರಿಯಲ್ಲಿ ಶೇ.17.54ರಷ್ಟು ಮತಗಳಿಸಿದ್ದರೂ, ಒಂದು ಸ್ಥಾನದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಬಿಜೆಪಿ ಶೇ.12.19ರಷ್ಟು ಮತ ಗಳಿಸಿದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲವಾದರೂ ಶೇ.2.79ರಷ್ಟು ಮತ ಶೇಖರಿಸಿದೆ. ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಮತ್ತು ಶೇ.3.37ರಷ್ಟು ಮತಗಳಿಸಲು ಮಾತ್ರ ಸಾಧ್ಯವಾಗಿದೆ. ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮಿರುವ ನಟ ವಿಜಯ್ ನೇತೃತ್ವದ ಟಿವಿಕೆ ಶೇ.34.92ರಷ್ಟು ಮತ ಪಡೆದು, 108 ಕ್ಷೇತ್ರಗಳಲ್ಲಿ ಗೆದ್ದಿದೆ. ಆಡಳಿತಾರೂಢ ಡಿಎಂಕೆ 59ರಲ್ಲಿ ಗೆದ್ದು, ಶೇ.24.19ರಷ್ಟು, ಪ್ರತಿಪಕ್ಷವಾಗಿದ್ದ ಎಐಎಡಿಎಂಕೆ 47ರಲ್ಲಿ ಗೆದ್ದು, ಶೇ.21.21ರಷ್ಟು ಮತ ಗಳಿಸಿದೆ. ಇಲ್ಲಿಯೂ ಕಾಂಗ್ರೆಸ್ ಸಾಧನೆ ಕಳಪೆಯಾಗಿದೆ.
ಮತಗಳಿಕೆಯಲ್ಲಿ ಕೈ ಪಡೆಯ ಸಾಧನೆ ರಾಷ್ಟ್ರಮಟ್ಟದಲ್ಲಿ ಸಂಚಕಾರ ತಂದುಕೊಳ್ಳುವ ಪರಿಸ್ಥಿತಿಯನ್ನು ನಿರ್ಮಿಸಿದೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ಗಿಂತಲೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹೆಚ್ಚು ಮತಗಳಿಸಿ ಮುಖ್ಯಭೂಮಿಕೆಯತ್ತ ಕಾಲಿಡುತ್ತಿದೆ. ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಿರುವ ಕಡೆಯಲೆಲ್ಲಾ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ.
ಬದಲಾದ ಜನರ ನಿರೀಕ್ಷೆಗಳು :
ಭವಿಷ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗಳಲ್ಲಿ ಅಪ್ರಸ್ತುತವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಈಗಲೂ ರಾಜವಂಶ ಆಳ್ವಿಕೆಯ ಧಿಮಾಕು, ದೌಲತ್ತುಗಳು ಕಡಿಮೆಯಾದಂತಿಲ್ಲ.
ಬದಲಾದ ಕಾಲಮಾನದಲ್ಲಿ ಯುವ ಸಮುದಾಯ ನೈಜ ಪ್ರಜಾಪ್ರಭುತ್ವದತ್ತ ಆಸಕ್ತಿ ವಹಿಸುತ್ತಿದ್ದಾರೆ. ಈ ಹಿಂದೆ ಅಮ್ ಆದಿ ಪಕ್ಷ ಜನ ಸಾಮಾನ್ಯರಿಗೆ ಟಿಕೆಟ್ ನೀಡಿದ್ದಕ್ಕಾಗಿಯೇ ದೆಹಲಿ ಮತ್ತು ಪಂಜಾಬ್ನಲ್ಲಿ ಗೆದ್ದು ಬೀಗಿತ್ತು. ಯಾವುದೇ ಸ್ಟಾರ್ ಗಿರಿ ಇಲ್ಲದಿದ್ದರೂ ನೈಜ್ಯ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಚುನಾವಣೆ ಎದುರಿಸಿದ್ದಕ್ಕಾಗಿ ಜನ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಅರವಿಂದ್ ಕೇಜ್ರಿವಾಲ್ರನ್ನು ಕೈ ಹಿಡಿದಿದ್ದರು.
ಒಂದು ಅವಧಿಗೆ ಆಡಳಿತ ನಡೆಸುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಟಿಪಿಕಲ್ ರಾಜಕೀಯ ಪಕ್ಷಗಳಂತೆ ಪ್ರಭಾವಿಗಳಿಗೆ ಮಣೆ ಹಾಕಲಾರಂಭಿಸಿದರು. ಪರಿಣಾಮ ದೆಹಲಿಯಲ್ಲಿ ಮೂರನೇ ಅವಧಿಯಲ್ಲಿ ಸೋಲು ಕಾಣಬೇಕಾಯಿತು. ಆ ವೇಳೆ ಅಮ್ ಆದಿ ಸೋಲಿನಲ್ಲಿ ಬಿಜೆಪಿ ಅನುಸರಿಸಿದ ಆಕ್ರಮಣಕಾರಿ ತಂತ್ರಗಾರಿಕೆಗಳ ಪಾಲಿತ್ತು ಎಂಬದು ನಿರ್ವಿವಾದ.
ಈಗ ತಮಿಳುನಾಡಿನಲ್ಲಿ 21 ತಿಂಗಳ ಹಿಂದೆ ಸ್ಥಾಪನೆಯಾದ ಟಿವಿಕೆ ಎರಡು ಪ್ರಬಲ ಸ್ಥಳೀಯ ಅಸಿತೆಯ ಪಕ್ಷಗಳನ್ನು ಮಕಾಡೆ ಮಲಗಿಸಿದೆ ಎಂದರೆ ಜನ ಬಯಸುವುದನ್ನು ಮಾಡಲು ಹೊರಟವರಿಗೆ ಮನ್ನಣೆ ಸಿಗಲಿದೆ ಎಂಬುದು ಸ್ಪಷ್ಟವಾಗುತ್ತಿದೆ. ಡ್ರೈವರ್ ಮಗನಿಗೆ, ಆಟೋ ಡ್ರೈವರ್ಗೆ, ತರಕಾರಿ ಮಾರುವವರಿಗೆ ಸೇರಿದಂತೆ ಸಾಮಾನ್ಯ ಜನರಿಗೆ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲು ವಿಜಯ್ ಅವಕಾಶ ಮಾಡಿಕೊಟ್ಟರು.
ಈಗಿನ ಪ್ರಜ್ಞಾವಂತ ಯುವ ಜನ ಸಮುದಾಯವನ್ನು ಆಕರ್ಷಿಸುತ್ತಿರುವುದೇ ಇಂತಹ ಅಂಶಗಳು. ವಿಜಯ್ ಗೆ ಸ್ಟಾರ್ ಗಿರಿ ಇತ್ತು ಎಂಬುದು ನಿಜ, ಅದೇ ರೀತಿ ಕಮಲ್ ಹಾಸನ್ ಕೂಡ ಸ್ಟಾರ್ ಆಗಿದ್ದರು. ಆದರೆ ಸೋಷಿಯಲ್ ಎಂಜಿನಿಯರಿಂಗ್ ನಲ್ಲಿ ವಿಫಲರಾದರು. ಇತ್ತೀಚಿನ ರಾಜಕೀಯ ಟ್ರೆಂಡ್ ನಲ್ಲಿ ಪ್ರಜಾಭುತ್ವದಲ್ಲಿ ಜನ ಸಾಮಾನ್ಯರ ಪಾಲ್ಗೊಳ್ಳುವಿಕೆಗೆ ಅವಕಾಶ ಮಾಡಿಕೊಡುವವರಿಗೆ ಜನ ಮಣೆ ಹಾಕುತ್ತಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲೂ ಅನುಕಂಪದ ಅಲೆಯ ನೆಪ ಮಾಡಿಕೊಂಡು ಕುಟುಂಬಗಳಿಗೆ ಟಿಕೆಟ್ ನೀಡಿತ್ತು. ಬಾಗಲಕೋಟೆಯಲ್ಲಿ ಖುದ್ದು ಮುಖ್ಯಮಂತ್ರಿ 15 ದಿನ ಪ್ರಚಾರ ನಡೆಸಬೇಕಾಯಿತು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಕುಟುಂಬ ತನ್ನಲ್ಲಾ ಪ್ರಭಾವ, ಆರ್ಥಿಕ ಸಾಮರ್ಥ್ಯವನ್ನು ಬಳಸಿ ಪ್ರಯಾಸದ ಗೆಲುವು ಕಂಡಿದೆ.
ಕಾಂಗ್ರೆಸ್ ದಿನೇ ದಿನೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಆದರೆ ಅದರಲ್ಲಿನ ನಾಯಕರ ಧೋರಣೆಗಳು ಬದಲಾಗುತ್ತಿಲ್ಲ. ತಮಗೊಂದು ತಮ ಕುಟುಂಬಕ್ಕೆ ಎರಡು ಎಂಬಂತೆ ಎಲ್ಲವನ್ನೂ ಅವರೇ ಅನುಭವಿಸುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇನು ಎಂದು ಯುವ ಸಮುದಾಯ ಪ್ರಶ್ನಿಸಲಾರಂಭಿಸಿದ್ದಾರೆ. ತಮಿಳುನಾಡಿನಲ್ಲಿನ ರಾಜಕೀಯ ವಿಪ್ಲವವನ್ನು ನೋಡಿದ ಮೇಲಾದರೂ ಕಾಂಗ್ರೆಸ್ ಬದಲಾಗಲಿ ಎಂದು ಕಾರ್ಯಕರ್ತರು ಆಶಿಸುತ್ತಿದ್ದಾರೆ.
