ಬೆಂಗಳೂರು,ಏ.7- ಉತ್ತರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಿಇಐಆರ್ ತಂತ್ರಾಂಶದ ಮೂಲಕ ಹಲವಾರು ಪ್ರಕರಣಗಳನ್ನು ಪತ್ತೆಹಚ್ಚಿ ಕಳುವಾಗಿದ್ದ 22.3 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 110 ಮೊಬೈಲ್ಗಳನ್ನು ವಶಪಡಿಸಿ ಕೊಂಡಿದ್ದಾರೆ.
ಉತ್ತರ ವಿಭಾಗದ 13 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳುವಾಗಿದ್ದ ಮೊಬೈಲ್ಗಳ ವಿವರವನ್ನು ಸಿಇಐಆರ್ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಕಳೆದ ಮಾರ್ಚ್ ತಿಂಗಳಿನಲ್ಲಿ ಸಿಇಐಆರ್ ಪೋರ್ಟಲ್ನ ಸಹಾಯದಿಂದ ಮೊಬೈಲ್ಗಳ ಪತ್ತೆಕಾರ್ಯದಲ್ಲಿ ತೊಡಗಿಕೊಂಡು 110 ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ಟಿನಗರ ವ್ಯಾಪ್ತಿಯಲ್ಲಿ 12, ಜಾಲಹಳ್ಳಿ 8, ಜೆಸಿನಗರ 9, ಮಹಾಲಕ್ಷ್ಮೀ ಲೇಔಟ್ 12, ಸಂಜಯನಗರ 6, ರಾಜಾಜಿನಗರ 10, ಸುಬ್ರಹಣ್ಯನಗರ 11, ನಂದಿನಿಲೇಔಟ್ 12, ಮಲ್ಲೇಶ್ವರಂ 8, ಹಬ್ಬಾಳ 3, ಯಶವಂತಪುರ 10, ಆರ್ಎಮ್ಸಿಯಾರ್ಡ್ 4, ಶ್ರೀರಾಮಪುರ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಐದು ಮೊಬೈಲ್ಗಳನ್ನು ಪತ್ತೆಹಚ್ಚಲಾಗಿದೆ.
ಮನವಿ :ಸಾರ್ವಜನಿಕರು ಕಳೆದುಕೊಂಡ ಮೊಬೈಲ್ಗಳ ವಿವರಗಳನ್ನು ಸಿಇಐಆರ್ ಪೋರ್ಟಲ್ನಲ್ಲಿ ದಾಖಲಿಸುವುದರಿಂದ ಅಥವಾ ಪೊಲೀಸ್ ಠಾಣೆಗಳಿಗೆ ದೂರು ನೀಡುವುದರಿಂದ ಮೊಬೈಲ್ಗಳನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ಉತ್ತರ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.
ನಗರ ಪೊಲೀಸರ ಕಾರ್ಯಾಚರಣೆ ವಿದೇಶಿ ಪ್ರಜೆ ಸೇರಿ ಎಂಟು ಮಂದಿ ಸೆರೆ : 27.42 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ
ಬೆಂಗಳೂರು,ಏ.7-ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ನಗರ ಪೊಲೀಸರು ದಾಳಿ ಮಾಡಿ ವಿದೇಶಿ ಪ್ರಜೆ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ 27.42 ಕೋಟಿ ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ.
ಹೆಬ್ಬಗೋಡಿ ,ಯಲಹಂಕ ಉಪನಗರ ,ಮೈಕೋ ಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಹಾಗೂ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಎಂಡಿಎಂಎ, ಕೋಕೆನ್ ಮಾರಾಟ ಮಾಡುತ್ತಿರುವ ಬಗ್ಗೆ ನಗರ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಈ ಮಾಹಿತಿಗಳನ್ನಾಧರಿಸಿ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಸ್ಥಳಗಳ ಮೇಲೆ ಪೊಲೀಸರು ದಾಳಿ ಮಾಡಿ ಒಬ್ಬ ವಿದೇಶಿ ಪ್ರಜೆ, ಹೊರರಾಜ್ಯದ ನಾಲ್ವರು ಹಾಗೂ ಸ್ಥಳೀಯ ಮೂವರು ವ್ಯಕ್ತಿಗಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ಬಾಯ್ಬಿಟ್ಟಿದ್ದಾರೆ.
ಹೆಬ್ಬಗೋಡಿ ಠಾಣೆ ಪೊಲೀಸರು 27 ಕೋಟಿ ಮೌಲ್ಯದ 12 ಕೆಜಿ 55 ಗ್ರಾಂ ಎಂಡಿಎಂಎ, 275 ಗ್ರಾಂ ಕೋಕೆನ್, 40 ಗ್ರಾಂ ಚಿನ್ನಾಭರಣ, 2.85 ಲಕ್ಷ ನಗದು, 1 ಕಾರು, 2 ಮೊಬೈಲ್ ವಶಪಡಿಸಿ ಕೊಂಡಿದ್ದಾರೆ.
ಯಲಹಂಕ ಉಪನಗರ ಠಾಣೆ ಪೊಲೀಸರು 21 ಕೆಜಿ 175 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 21 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.ಮೈಕೋಲೇಔಟ್ ಠಾಣೆ ಪೊಲೀಸರು 6.60 ಲಕ್ಷ ರೂ. ಮೌಲ್ಯದ 6ಕೆಜಿ 400 ಗ್ರಾಂ ಗಾಂಜಾ, ಪರಪ್ಪನ ಅಗ್ರಹಾರ ಠಾಣೆ ಪೊಲೀಸರು 7.60 ಲಕ್ಷ ರೂ. ಮೌಲ್ಯದ 7 ಕೆಜಿ 277 ಗ್ರಾಂ ಗಾಂಜಾ,ಎರಡು ದ್ವಿಚಕ್ರ ವಾಹನ ಹಾಗೂ ಬಾಗಲೂರು ಠಾಣೆ ಪೊಲೀಸರು 4 ಲಕ್ಷ ಮೌಲ್ಯದ 20 ಗ್ರಾಂ ಎಂಡಿಎಂಎ ಮತ್ತು ಬಾಣಸವಾಡಿ ಠಾಣೆ ಪೊಲೀಸರು 3.20 ಲಕ್ಷ ರೂ. ಮೌಲ್ಯದ 16 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಒಟ್ಟಾರೆ ವಶಪಡಿಸಿಕೊಂಡಿರುವ ಮಾಲುಗಳ ಒಟ್ಟು ಮೌಲ್ಯ 27.42 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಈ ಆರೋಪಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿ ರುತ್ತದೆ.
ಹೊರರಾಜ್ಯದ ಇಬ್ಬರ ಬಂಧನ : 5.79 ಲಕ್ಷ ರೂ. ಮೌಲ್ಯದ 23 ಮೊಬೈಲ್ಗಳು, 3 ಲ್ಯಾಪ್ಟಾಪ್, ಟ್ಯಾಬ್ ವಶ
ಬೆಂಗಳೂರು,ಏ.7- ಕಿಟಕಿ ಮೂಲಕ ಕೈ ತೂರಿಸಿ ಬಾಗಿಲ ಚಿಲಕ ತೆಗೆದು ಮನೆಯೊಳಗೆ ನುಗ್ಗಿ ಕಳವು ಮಾಡಿದ್ದ ಹೊರರಾಜ್ಯದ ಇಬ್ಬರನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿ 5.79 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 23 ಮೊಬೈಲ್ಗಳು ಹಾಗೂ ಮೂರು ಲ್ಯಾಪ್ಟಾಪ್, ಒಂದು ಟ್ಯಾಬ್ ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ಮೂಲದ ಕಬೀರ್ ಹುಸೇನ್ (25) ಮತ್ತು ಅಬು ಸಾಯಿಬ್ (25) ಬಂಧಿತ ಆರೋಪಿಗಳು. ಇವರಿಬ್ಬರು ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ವಾಸವಾಗಿದ್ದು ಕೊಂಡು ಹೌಸ್ಕೀಪಿಂಗ್ ಕೆಲಸ ಮಾಡಿಕೊಂಡಿದ್ದರಲ್ಲದೇ ಕಳ್ಳತನದ ಹಾದಿ ಹಿಡಿದು ಸಿಕ್ಕಿ ಬಿದ್ದಿದ್ದಾರೆ.
ಮಹದೇಶ್ವರ ನಗರ ಬಿಟಿಎಂ 2ನೇ ಹಂತದಲ್ಲಿ ವಾಸವಿರುವ ಗೆಳೆಯನ ಮನೆಗೆ ಮಾ.28 ರಂದು ಸ್ನೇಹಿತ ಹೋಗಿದ್ದು, ರಾತ್ರಿ ತನ್ನ ಮೊಬೈಲ್ ಹಾಗೂ ಮನೆಯಲ್ಲಿದ್ದ ದಂಪತಿಯ ಎರಡು ಮೊಬೈಲ್ ಸೇರಿ ಮೂರು ಮೊಬೈಲ್ಗಳು ಹಾಗೂ ಹಣವನ್ನು ಟೇಬಲ್ ಮೇಲಿಟ್ಟು ಮಲಗಿದ್ದರು.ಬೆಳಗಾಗುವಷ್ಟರಲ್ಲಿ ಹಣ ಹಾಗೂ ಮೊಬೈಲ್ಗಳು ಇರ ಲಿಲ್ಲ. ಕಳ್ಳರು ಕಿಟಕಿ ಮೂಲಕ ಕೈ ತೂರಿಸಿ ಬಾಗಿಲ ಚಿಲಕ ತೆಗೆದು ಮನೆಯೊಳಗೆ ನುಗ್ಗಿ ಟೇಬಲ್ ಮೇಲಿಟ್ಟಿದ್ದ ಮೊಬೈಲ್ಗಳು, ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿ ರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮಾಹಿತಿಗಳನ್ನು ಕಲೆ ಹಾಕಿ ಸಿಲ್್ಕಬೋರ್ಡ್ ಬಸ್ ನಿಲ್ದಾಣದ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ಹೇಳಿದ್ದಾರೆ.
ಅಲ್ಲದೆ ನಗರದ ವಿವಿಧ ಕಡೆಗಳಲ್ಲಿಯೂ ಲ್ಯಾಪ್ಟಾಪ್ ಹಾಗೂ ಮೊಬೈಲ್ಗಳನ್ನು ಕಳವು ಮಾಡಿ ಆನೆಕಲ್ ತಾಲ್ಲೂ ಕಿನ ಬಳ್ಳೂರು ಗ್ರಾಮದ ತಮ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಅದರಂತೆ ಪೊಲೀಸರು ಒಟ್ಟು 23 ಮೊಬೈಲ್ಗಳು, ಒಂದು ಟ್ಯಾಬ್, ಮೂರು ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದು, ಅವುಗಳ ಒಟು ಮೌಲ್ಯ 5.79 ಲಕ್ಷ ರೂ.ಗಳೆಂದು ಅಂದಾಜಿಸ ಲಾಗಿದೆ. ಆರೋಪಿಗಳಿಬ್ಬರ ಬಂಧನ ದಿಂದ ಮೈಕೋ ಲೇಔಟ್ ಪೊಲೀಸ್ ಠಾಣೆಯ ಒಂದು ಕಳವು ಪ್ರಕರಣ ಹಾಗೂ ಮಾರತಹಳ್ಳಿ ಪೊಲೀಸ್ ಠಾಣೆಯ ಲ್ಯಾಪ್ಟಾಪ್ ಕಳವು ಪ್ರಕರಣ ಸೇರಿದಂತೆ ಎರಡು ಪ್ರಕರಣಗಳು ಪತ್ತೆಹಚ್ಚುವಲ್ಲಿ ಇನ್ಸ್ಪೆಕ್ಟರ್ ನಟರಾಜ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
