ದುಬೈ,ಏ.8- ಅಮೆರಿಕ-ಇರಾನ್ ಜೊತೆಗೆ 14 ದಿನಗಳ ಕದನ ವಿರಾಮವನ್ನು ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಕುಸಿತಗೊಂಡಿದೆ. ಇಂದು ಬೆಳಿಗ್ಗೆ ಕಚ್ಚಾ ತೈಲದ ಬೆಲೆಗಳು ಸುಮಾರು 13% ರಿಂದ 17% ರಷ್ಟು ಕುಸಿದಿವೆ. ಇದು ಕಳೆದ ಆರು ವರ್ಷಗಳಲ್ಲೇ ಒಂದೇ ದಿನ ಕಂಡ ಅತಿ ದೊಡ್ಡ ಕುಸಿತ ಇದಾಗಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆ ಸುಮಾರು 16.13 ಡಾಲರ್ (14.3%) ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ 96.82 ಡಾಲರ್(8,940 ರೂ.) ತಲುಪಿದೆ.ಜಾಗತಿಕ ಮಾನದಂಡವಾದ ಒಪೆಕ್ ದೇಶಗಳ ಬ್ರೆಂಟ್ ಕಚ್ಚಾ ತೈಲದ ದರ 14.84 ಡಾಲರ್ (13.6%) ನಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ 94.43 ಡಾಲರ್ಗೆ(8,720 ರೂ.) ಇಳಿಕೆಯಾಗಿದೆ.
ಈ ಘೋಷಣೆಗೂ ಮುನ್ನ ಯುದ್ಧದ ಭೀತಿಯಿಂದಾಗಿ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 117/120 ಡಾಲರ್ವರೆಗೂ (11 ಸಾವಿರ ರೂ.ವರೆಗೆ) ಏರಿಕೆಯಾಗಿತ್ತು ಇರಾನ್ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಲು ಇರಾನ್ ಒಪ್ಪಿಗೆ ನೀಡಿದ್ದರಿಂದ ಮಾರುಕಟ್ಟೆಯಲ್ಲಿನ ಆತಂಕವನ್ನು ಕಡಿಮೆ ಮಾಡಿದೆ.
ಜಗತ್ತಿನ ಸುಮಾರು 20% ತೈಲ ಪೂರೈಕೆ ಈ ಮಾರ್ಗದ ಮೂಲಕವೇ ನಡೆಯುವುದರಿಂದ ಪೂರೈಕೆ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಲೆ ಇಳಿದಿದೆ.
