ಬೆಂಗಳೂರು,ಏ.9- ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದ ತಪ್ಪಲಿನ ಮಾಣಿಕ್ಯಾದಾರಕ್ಕೆ ಕುಟುಂಬದ ಜೊತೆ ಬಂದಿದ್ದ 15 ವರ್ಷದ ಬಾಲಕಿ ಶ್ರೀನಂದಾ ಇದ್ದಕ್ಕಿದ್ದಂತೆ ಆ ದಟ್ಟ ಕಾನನದಲ್ಲಿ ಕಾಣೆಯಾಗಿದ್ದು, ಎರಡು ದಿನ ಕಳೆದರೂ ಸುಳಿವು ಸಿಕ್ಕಿಲ್ಲ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.ಎಸ್ ಎಸ್ ಎಲ್ ಸಿ ಓದುತ್ತಿದ್ದ ಬಾಲಕಿ ಶ್ರೀನಂದಾ ಮಂಗಳವಾರ ಸಂಜೆ 5.30 ಕ್ಕೆ ನಾಪತ್ತೆಯಾಗಿದ್ದಾಳೆ. ಘಟನೆಯ ತೀವ್ರತೆಯನ್ನು ಅರಿತ ಸಚಿವರು, ಕೇವಲ ಪೊಲೀಸ್ ಮತ್ತು ಜಿಲ್ಲಾಡಳಿತವಷ್ಟೇ ಅಲ್ಲದೇ, ದಟ್ಟ ಅರಣ್ಯದಲ್ಲಿ ಸಂಚರಿಸಲು ಪರಿಣಿತಿ ಹೊಂದಿರುವ ಅರಣ್ಯ ಇಲಾಖೆಯ ವಿಶೇಷ ತಂಡವನ್ನು ಕಳುಹಿಸಿದ್ದಾರೆ.
ಬಾಲಕಿ ನಾಪತ್ತೆಯಾದ ಸ್ಥಳವು ಅತ್ಯಂತ ಕಡಿದಾದ ಗುಡ್ಡಗಳಿಂದ ಕೂಡಿದೆ. ಆ ಪ್ರದೇಶವು ತಾಂತ್ರಿಕವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರದಿದ್ದರೂ, ಬಾಲಕಿಯ ಪ್ರಾಣ ಉಳಿಸುವ ದೃಷ್ಟಿಯಿಂದ ಇಲಾಖೆಯ ಬೆಂಬಲ ಅತ್ಯಗತ್ಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸಚಿವರು, ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ದಟ್ಟವಾದ ಗಿಡಗಂಟಿಗಳು ಮತ್ತು ಗುಡ್ಡಗಾಡು ಪ್ರದೇಶವಾಗಿರುವುದರಿಂದ, ಮನುಷ್ಯನ ಕಣ್ಣಿಗೆ ನಿಲುಕದ ಜಾಗಗಳನ್ನು ಪತ್ತೆಹಚ್ಚಲು ಥರ್ಮಲ್ ಸೆನ್ಸರ್ ಇರುವ ಡ್ರೋನ್ ಗಳನ್ನು ಬಳಸಲು ಸೂಚಿಸಲಾಗಿದೆ.ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ ಈಗ ಪೊಲೀಸ್ ಪಡೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯಾಚರಣೆ ನಡೆಸಲಿದ್ದಾರೆ.
ಸವಾಲಿನ ಹಾದಿ
ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಹಾಗೂ ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ ಏ.7ರ ಮಧ್ಯರಾತ್ರಿ 1 ಗಂಟೆವರೆಗೆ ಹುಡುಕಾಡಿದ್ದಾರೆ. ಆದರೆ, ಆಕೆಯ ಸುಳಿವು ಸಿಕ್ಕಿಲ್ಲ. ಕಗ್ಗತ್ತಲು, ದಟ್ಟ ಕಾನನ, ಬೆಟ್ಟ-ಗುಡ್ಡಗಳ ಇಳಿಜಾರು ಪ್ರದೇಶ ಆಗಿದ್ದರಿಂದ ಕಾರ್ಯಾಚರಣೆ ಕೈಬಿಟ್ಟ ಅಧಿಕಾರಿಗಳು ಏ.8ರ ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಮುಂದುವರೆಸಿದ್ದರು. ಇದೀಗ, ಶೋಧ ಕಾರ್ಯಕ್ಕೆ ಎಸ್.ಡಿ.ಆರ್.ಎಫ್ ತಂಡ ಕೂಡ ಜೊತೆಗೂಡಿದೆ.
ಬೆಳಗಿನಜಾವ 5 ಗಂಟೆಯಿಂದಲೇ ಶೋಧ ಕಾರ್ಯ ಆರಂಭಿಸಿದ ಸಿಬ್ಬಂದಿ ಥರ್ಮಲ್ ಡ್ರೋನ್ ಮೂಲಕ ಬಾಲಕಿ ಪತ್ತೆಗೆ ಮುಂದಾಗಿದ್ದಾರೆ. ಮೂರು ಇಲಾಖೆಯ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ 5 ತಂಡಗಳನ್ನಾಗಿ ಮಾಡಿಕೊಂಡು ಶೋಧ ಕಾರ್ಯಕ್ಕೆ ಇಳಿದಿದ್ದಾರೆ.
ಬಾಲಕಿ ನಾಪತ್ತೆಯಾದ ಆದ ಜಾಗ ತೀವ್ರ ಕಡಿದಾದ ಪ್ರದೇಶವಾಗಿದ್ದು ಅಲ್ಲಿಂದ ಯಾವ-ಯಾವ ಮಾರ್ಗದಲ್ಲಿ ಹೋಗಲು ಸಾಧ್ಯವಿರುತ್ತದೆಯೋ ಆ ಮಾರ್ಗದಲ್ಲೆಲ್ಲಾ ತಂಡ ಹುಡುಕಾಡುತ್ತಿದೆ. ಆದರೆ ಜಾರಿದ್ದಾಳೆ ಎನ್ನವುದಕ್ಕೆ ಮಳೆ ಇಲ್ಲ. ಕಾಡು ಬೇಸಿಗೆಗೆ ಒಣಗಿ ಬಿಡಿಬಿಡಿಯಾಗಿದೆ. ನಾಪತ್ತೆಯಾದ ಒಂದು ಗಂಟೆಯಿಂದಲೇ ಹತ್ತಾರು ಜನ ಹುಡುಕಾಡಿದರೂ ಸಿಗದಿರೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
