ಬೆಂಗಳೂರು,ಏ.9- ಹಸೆಮಣೆ ಏರಬೇಕಿದ್ದ ಪೆಟ್ರೋಲ್ ಬಂಕ್ ಮಾಲೀಕನಿಗೆ ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಬನಶಂಕರಿ ನಿವಾಸಿ ಅಕ್ಷಿತ್ (27) ಮೃತಪಟ್ಟ ಮಧುಮಗ. ಈತ ಪೆಟ್ರೋಲ್ ಬಂಕ್ವೊಂದರ ಮಾಲೀಕ.ಅಕ್ಷಿತ್ ಅವರ ಮದುವೆ ಇದೇ ತಿಂಗಳ 29 ಮತ್ತು 30 ರಂದು ನಿಗಧಿಯಾಗಿದೆ. ಸ್ನೇಹಿತನಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡಲು ನಿನ್ನೆ ರಾತ್ರಿ ಹುಳಿಮಾವು ಗ್ರಾಮಕ್ಕೆ ಹೋಗಿದ್ದಾರೆ.
ಹುಳಿಮಾವು ಗ್ರಾಮದ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ನಿನ್ನೆ ಬ್ರಹ ರಥೋತ್ಸವ ನಿಮಿತ್ತ ರಾತ್ರಿ ಪಲ್ಲಕ್ಕಿ ಉತ್ಸವವಿತ್ತು. ಹಾಗಾಗಿ ಪಲ್ಲಕ್ಕಿ ಉತ್ಸವ ನೋಡಿಕೊಂಡು ಹೋಗುವಂತೆ ಸ್ನೇಹಿತ ಒತ್ತಾಯಿಸಿದ್ದರಿಂದ ರಾತ್ರಿ ಅಲ್ಲೇ ಅಕ್ಷಿತ್ ಉಳಿದುಕೊಂಡಿದ್ದಾರೆ.ಇಂದು ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ಟ್ರ್ಯಾಕ್ಟರ್ನಲ್ಲಿ ಪಲ್ಲಕ್ಕಿ ಇರಿಸಿ ಮೆರವಣಿಗೆ ಬರುತ್ತಿದ್ದಾಗ ಅಕ್ಷಿತ್ ರಸ್ತೆ ಬದಿ ನಿಂತು ನೋಡುತ್ತಿದ್ದರು.
ಆ ವೇಳೆ ಇಳಿಜಾರು ಪ್ರದೇಶದಲ್ಲಿ ಪಲ್ಲಕ್ಕಿ ಇದ್ದ ಟ್ರ್ಯಾಕ್ಟರ್ ತಿರುವು ಪಡೆಯುವ ವೇಳೆ ನಿಯಂತ್ರಣ ತಪ್ಪಿ ಅಕ್ಷಿತ್ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಆತನ ಮೇಲೆ ಟ್ರ್ಯಾಕ್ಟರ್ನ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡರು.
ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಹುಳಿಮಾವು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
