ಬೆಂಗಳೂರು, ಮೇ 8- ನೆರೆ ರಾಜ್ಯ ಕೇರಳಂನಲ್ಲಿನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗಳು ರಾಜ್ಯ ರಾಜಕಾರಣದಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿವೆ.ಕೇರಳ ರಾಜ್ಯದ ಮುಖ್ಯಮಂತ್ರಿ ರೇಸಿನಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಕೆ.ಸಿ.ವೆಣುಗೋಪಾಲ್, ರಮೇಶ್ ಚೆನ್ನಿತ್ತಲ ಹಾಗೂ ಶಶಿತರೂರ್ ಪ್ರಬಲ ಅಕಾಂಕ್ಷಿಗಳಾಗಿದ್ದಾರೆ. ಶಶಿತರೂರ್ ಮತ್ತು ಕೆ.ಸಿ.ವೇಣುಗೋಪಾಲ್ ಸಂಸದರಾಗಿದ್ದು, ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೇರಿದರೆ, ಲೋಕಸಭೆಗೆ ಉಪಚುನಾವಣೆ ನಡೆಯುವ ಅನಿವಾರ್ಯತೆ ಎದುರಾಗಲಿದೆ.
ಕೇರಳ ಕಾಂಗ್ರೆಸ್ ಮತ್ತು ಯುಡಿಎಫ್‌ನ ಮಿತ್ರಪಕ್ಷಗಳು ಸಂಸದರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದನ್ನು ಪ್ರಬಲವಾಗಿ ವಿರೋಧಿಸುತ್ತಿವೆ. ವಿರೋಧ ಪಕ್ಷದ ನಾಯಕರಾಗಿ ಕಳೆದ 5 ವರ್ಷಗಳಿಂದ ಪ್ರಬಲ ಹೋರಾಟ ನಡೆಸಿದ ವಿ.ಡಿ.ಸತೀಶನ್‌ಅವರ ಪರವಾಗಿ ಒಲವು ವ್ಯಕ್ತವಾಗಿದೆ. ಆದರೆ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ರಾಜ್ಯ ರಾಜಕಾರಣಕ್ಕೆ ಮರಳುವ ಆಸಕ್ತಿ ತೋರಿಸಿದ್ದು, ಮುಖ್ಯಮಂತ್ರಿಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ.
ಒಂದು ವೇಳೆ ಕೆ.ಸಿ.ವೇಣುಗೋಪಾಲ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದರೆ, ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಚರ್ಚೆಯ ಮೇಲೆ ಪರಿಣಾಮ ಉಂಟಾಗಲಿದೆ. ಕೆ.ಸಿ.ವೇಣುಗೋಪಾಲ್, ರಾಹುಲ್ ಗಾಂಧಿ ಅವರ ಆಪ್ತ ಬಳಗದಲ್ಲಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ಆತೀಯ ಬಾಂಧವ್ಯ ಹೊಂದಿದ್ದಾರೆ. ದೆಹಲಿ ಮಟ್ಟದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಬೆಳೆಯಲು ಕೆ.ಸಿ.ವೇಣುಗೋಪಾಲ್ ಅವರ ಶಿಫಾರಸುಗಳು ಕಾರಣವಾಗಿವೆ ಎಂದು ಹೇಳಲಾಗುತ್ತಿವೆ.
ಕರ್ನಾಟಕ ರಾಜ್ಯ ಉಸ್ತುವಾರಿ ನಾಯಕರಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ, ಡಿ.ಕೆ.ಶಿವಕುಮಾರ್ ಅವರ ಪರವಾಗಿದ್ದು, ಎರಡೂವರೆ ವರ್ಷದ ಅಧಿಕಾರ ಸೂತ್ರಕ್ಕೆ ಬದ್ಧರಾಗಿದ್ದಾರೆ. ಸಹಜವಾಗಿಯೇ ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್ ಇಲ್ಲವೆಂದಾದರೆ, ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಈವರೆಗೂ ದೆಹಲಿಯಲ್ಲಿ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಅವರಿಗೆ ಭೇಟಿ ಮಾಡಲು ಸಮಯ ನೀಡಿಲ್ಲ. ಇದರ ಹಿಂದೆ ಕೆ.ಸಿ.ವೇಣುಗೋಪಾಲ್ ಅವರ ಪ್ರಭಾವವಿದೆ ಎಂದು ಹೇಳಲಾಗುತ್ತಿದೆ.
ಕೆ.ಸಿ.ವೇಣುಗೋಪಾಲ್ ರಾಜ್ಯ ರಾಜಕಾರಣಕ್ಕೆ ತೆರಳಿದರೆ, ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ವಕಾಲತ್ತು ವಹಿಸುವವರು ಇಲ್ಲದಂತಾಗಿ, ಡಿ.ಕೆ.ಶಿವಕುಮಾರ್ ಪರವಾದ ಅಲೆ ಸೃಷ್ಟಿಯಾಗಬಹುದು ಎಂಬ ಚರ್ಚೆಗಳಿವೆ.
ಕೇರಳದಲ್ಲಿ ಅಧಿಕಾರ ಹಿಡಿಯಲು ಕೆ.ಸಿ.ವೇಣುಗೋಪಾಲ್ ಕರ್ನಾಟಕದ ಸಚಿವರ ನೆರವು ಪಡೆದಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಚಿವ ಜಮೀರ್ ಅಹಮದ್ ಖಾನ್ ಚುನಾವಣೆಯ ಸಂದರ್ಭದಲ್ಲಿ ಕೇರಳದಲ್ಲಿ ಬೀಡುಬಿಟ್ಟು 7 ಜಿಲ್ಲೆಗಳ ಉಸ್ತುವಾರಿ ನಿರ್ವಹಿಸಿದ್ದರು. ಅವುಗಳಲ್ಲಿ ಒಟ್ಟು 33 ಕ್ಷೇತ್ರಗಳ ಪೈಕಿ 22 ಕಡೆ ಕಾಂಗ್ರೆಸ್ ಗೆಲುವು ಕಂಡಿತ್ತು.
ಕೆ.ಸಿ.ವೇಣುಗೋಪಾಲ್ ಇದೇ ರೀತಿ ಬೇರೆ ಬೇರೆ ರಾಜ್ಯಗಳ ಪ್ರಭಾವಿ ನಾಯಕರನ್ನು ಬಳಸಿಕೊಂಡು ಕೇರಳ ವಿಧಾನಸಭೆಯ ಚುನಾವಣೆಯಲ್ಲಿ ಕೆಲಸ ಮಾಡಿಸಿದ್ದರು. ಆ ಪ್ರಭಾವವನ್ನು ಬಳಸಿಕೊಂಡು ಮುಖ್ಯಮಂತ್ರಿ ಸ್ಥಾನ ತಮಗೆ ಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಚುನಾವಣೆ ಬಳಿಕದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಮೀರ್ ಅಹಮದ್ ಖಾನ್ ಕೇರಳಕ್ಕೆ ಭೇಟಿ ನೀಡಿದ್ದು ಗಮನಾರ್ಹವಾಗಿದೆ.
