ಬೆಂಗಳೂರು, ಮೇ 8- ಸವಾಲಿನ ಸಂದರ್ಭದಲ್ಲೂ ಬೇಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ಆಟಕ್ಕೆ ಅವಕಾಶ ನೀಡಿ ಹೆಚ್ಚು ಕಾಳಜಿವಹಿಸಿ ಭದ್ರತೆ ಒದಗಿಸಲಾಗಿತ್ತು. ಅಂತಹ ಸಂದರ್ಭದಲ್ಲೂ ಫೈನಲ್ ಪಂದ್ಯಾವಳಿಯನ್ನು ಗುಜರಾತಿಗೆ ಸ್ಥಳಾಂತರಿಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಸಕರು ಟಿಕೆಟ್ ಕೇಳಿದ್ದಕ್ಕಾಗಿ ಪಂದ್ಯಾವಳಿಯನ್ನು ಸ್ಥಳಾಂತರಿಸಲಾಗಿದೆ ಎಂದು ಮಾಡುತ್ತಿರುವ ಆರೋಪ ಆಧಾರ ರಹಿತ. ಈ ಬಗ್ಗೆ ಐಪಿಎಲ್ ಅಥವಾ ಕೆಸಿಎ ಸಂಸ್ಥೆಯವರು ನೇರವಾಗಿ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.
ಬಿಸಿಸಿಐ, ಕೆಸಿಎ ಮತ್ತು ಆರ್‌ಸಿಬಿ ಸಂಸ್ಥೆಗಳ ನಡುವೆ ಆಗಿರುವ ಒಪ್ಪಂದಗಳ ಬಗ್ಗೆ ತಮಗೆ ಮಾಹಿತಿ ಇಲ್ಲ. ಆದರೆ ಐಪಿಎಲ್ ಪಂದ್ಯಾವಳಿಯನ್ನು ಲಾಭದ ಆಸೆಯಿಂದ ನೋಡಲಾಗುತ್ತಿದೆ. ಬೆಂಗಳೂರಿನ ಕ್ರೀಡಾಂಗಣದಲ್ಲಿ 33 ಸಾವಿರ ಆಸನಗಳಲ್ಲಿ ಒಂದಿಷ್ಟು ಉಚಿತ ಟಿಕೆಟ್‌ಗಳು ಹೋಗುತ್ತಿವೆ ಎಂಬುದನ್ನು ಹೊರತು ಪಡಿಸಿದರೆ, ಭದ್ರತೆ ಅಥವಾ ವ್ಯವಸ್ಥೆಗಳಲ್ಲಾಗಲೀ ಯಾವುದೇ ಲೋಪವಿಲ್ಲ. ನಮ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಿದೆ. ಈ ಹಿಂದಿನ ವರ್ಷದಂತೆ ದುರಂತಗಳು ನಡೆಯಬಾರದು ಎಂದು ಹೆಚ್ಚಿನ ಕಾಳಜಿ ವಹಿಸಲಾಗಿತ್ತು ಎಂದರು.
ಐಪಿಎಲ್ ಪಂದ್ಯಾವಳಿಗಳು ಬೆಂಗಳೂರಿನಿಂದ ಸ್ಥಳಾಂತರವಾಗಬಾರದು ಎಂಬ ಕಾರಣಕ್ಕಾಗಿ ಸಂಕಷ್ಟದ ಸಂದರ್ಭದಲ್ಲೂ ಅನುಮತಿ ನೀಡಲಾಗಿತ್ತು. ನ್ಯಾಯಮೂರ್ತಿ ಮೈಕಲ್ ಖುನ್ನಾ ಅವರ ವರದಿಯ ಪ್ರಕಾರ ಹಲವಾರು ಕೆಲಸಗಳನ್ನು ಕೈಗೊಳ್ಳಬೇಕಿತ್ತು. ಅವುಗಳಲ್ಲಿ ದೀರ್ಘಾವಧಿ, ಅಲ್ಪಾವಧಿ ಎಂದು ವಿಂಗಡಿಸಲಾಗಿತ್ತು. ಅಲ್ಪಾವಧಿಯ ಕೆಲಸಗಳನ್ನು ತ್ವರಿತವಾಗಿ ಕೈಗೊಂಡು ಐಪಿಎಲ್ ಪಂದ್ಯಾವಳಿ ನಡೆಸಲು ಅನುವು ಮಾಡಿಕೊಡಲಾಗಿತ್ತು.
ಈಗ ಲಾಭದ ಆಸೆಯಿಂದ ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ 1 ಲಕ್ಷ ಆಸನಗಳಿವೆ. ಹೆಚ್ಚಿನ ಲಾಭವಾಗುತ್ತದೆ ಎಂಬ ಕಾರಣಕ್ಕಾಗಿ ಪಂದ್ಯಾವಳಿಯನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇದಕ್ಕೂ, ಸರ್ಕಾರಕ್ಕೂ ಸಂಬಂಧವಿಲ್ಲ ಎಂದರು.
ರಾಜ್ಯದಲ್ಲಿ ವಿಧಾನಸಭೆ, ವಿಧಾನ ಪರಿಷತ್ ಎರಡೂ ಸೇರಿದರೆ, 300 ಶಾಸಕರಾಗುತ್ತಾರೆ. ಒಬ್ಬರಿಗೆ ಎರಡು ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಒಟ್ಟು 600 ಟಿಕೆಟ್ ನೀಡುವ ಕಾರಣಕ್ಕಾಗಿ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಅವರು ಹೇಳಲಿ ಎಂದು ಖಾರವಾಗಿ ಸವಾಲು ಹಾಕಿದರು.
ಯಾರಿಗೆಲ್ಲಾ ಟಿಕೆಟ್ ಕೊಟ್ಟಿದ್ದಾರೆ. ಆರ್‌ಸಿಬಿಯವರು ಎಷ್ಟು ಜನರಿಗೆ ಟಿಕೆಟ್ ಕೊಟ್ಟಿದ್ದಾರೆ.
ಎದುರಾಳಿ ತಂಡದ ಸಿಎಸ್‌ಕೆಯವರು ಯಾರಿಗೆಲ್ಲಾ ಟಿಕೆಟ್ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ. ಶಾಸಕರಿಗೆ ಟಿಕೆಟ್ ನೀಡುವ ಕಾರಣಕ್ಕಾಗಿ ಪಂದ್ಯಾವಳಿ ಸ್ಥಳಾಂತರಗೊಳ್ಳುತ್ತಿಲ್ಲ. ಬಿಜೆಪಿ, ಜೆಡಿಎಸ್‌ನವರು ಏನಾದರೂ ಟೀಕೆ ಮಾಡಿಕೊಳ್ಳಲಿ. ಅವರ ಅವಧಿಯಲ್ಲಿ ಕ್ರೀಡೆಗೆ ಎಷ್ಟು ಪ್ರೋತ್ಸಾಹ ನೀಡುತ್ತಿದ್ದರು ಎಂದು ಎಲ್ಲರಿಗೂ ಗೊತ್ತಿದೆ ಎಂದರು.
ತಮಿಳುನಾಡಿನಲ್ಲಿ ರಾಜ್ಯಪಾಲರು ಟಿವಿಕೆಗೆ ಸರ್ಕಾರ ರಚಿಸಲು ಅವಕಾಶ ನೀಡದೇ ಇರುವುದು ಸರಿಯಲ್ಲ ಈಗಾಗಲೇ ಹಲವು ಪ್ರಕರಣಗಳಲ್ಲಿ ನಿರ್ಧಿಷ್ಟವಾದ ಸಂಪ್ರದಾಯಗಳಿವೆ. ಪಕ್ಷತೀತವಾಗಿ ರಾಜ್ಯಪಾಲರು ನಡೆದುಕೊಳ್ಳಬೇಕು. ಒಂದು ವೇಳೆ ಪಕ್ಷಪಾತಿಯಾದರೆ, ಟಿವಿಕೆ ಮುಖಂಡರು ನ್ಯಾಯಲಯದ ಮೊರೆ ಹೋಗಲು ಅವಕಾಶಗಳಿವೆ ಎಂದು ಹೇಳಿದರು.
