ಚೆನ್ನೈ, ಮೇ 8- ತಮಿಳುನಾಡು ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ಭಿನ್ನ ತಿರುವುಗಳು ಕಾಣಿಸಿಕೊಳ್ಳುತ್ತಿದ್ದು, ಸರ್ಕಾರ ರಚನೆಯ ಪ್ರಕ್ರಿಯೆಗಳ ಬಗ್ಗೆ ಇಂದು ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ರಾಜ್ಯಪಾಲರ ನಡೆಯನ್ನು ಖಂಡಿಸಿ, ಒಂದೆಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮಿರುವ ಟಿವಿಕೆ ಸಾಮೂಹಿಕ ರಾಜೀನಾಮೆಯ ಬೆದರಿಕೆಯೊಡ್ಡಿದೆ.
ಈ ನಡುವೆ ಎಐಎಡಿಎಂಕೆ ಜೊತೆ ಮೈತ್ರಿಯನ್ನು ಡಿಎಂಕೆಯ ಸರ್ವೋಚ್ಚ ನಾಯಕ ಎಂ.ಕೆ.ಸ್ಟಾಲಿನ್ ತಳ್ಳಿ ಹಾಕಿದ್ದರೂ ಕೂಡ ಒಳಗೊಳಗೆ ವದಂತಿಗಳು ಕೇಳಿ ಬರುತ್ತಲೇ ಇವೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಟಿವಿಕೆ ಶಾಸಕಾಂಗ ಪಕ್ಷದ ನಾಯಕ ಜೋಸೆಫ್ ವಿಜಯ್ ಎರಡು ಬಾರಿ ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ನಿನ್ನೆ ರಾಜ್ಯಪಾಲರು ತಮ ನಿಲುವನ್ನು ಸ್ಪಷ್ಟಪಡಿಸಿದ್ದು, ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯಾ ಬಲವನ್ನು ತೋರಿಸುವಂತೆ ಸಲಹೆ ನೀಡಿದ್ದಾರೆ. ಚರ್ಚೆಯ ನಡುವೆ ವಿಜಯ್ ಅವರು ತಮ ಬಹುಮತ ಸಾಬೀತಿಗೆ ಶನಿವಾರದವರೆಗೂ ಕಾಲಾವಕಾಶ ನೀಡಬೇಕು.
ಈ ಮಧ್ಯೆ ಬೇರೆ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಆಹ್ವಾನ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಅದಕ್ಕೆ ರಾಜ್ಯಪಾಲರು ಸಹಮತ ಸೂಚಿಸಿರುವುದಾಗಿ ತಿಳಿದು ಬಂದಿದೆ.ಈವರೆಗೂ ಇಂಡಿ ಮೈತ್ರಿ ಕೂಟದಲ್ಲಿ ಗುರುತಿಸಿಕೊಂಡಿದ್ದ ಸಿಪಿಐಎಂ, ಸಿಪಿಐ, ಪಿಸಿಕೆ ಪಕ್ಷಗಳು ಟಿವಿಕೆಗೆ ಬೆಂಬಲ ನೀಡುವ ಸಂಬಂಧಪಟ್ಟಂತೆ ಇಂದು ಸಂಜೆ ಸಭೆ ಸೇರಿ ನಿರ್ಣಯ ಕೈಗೊಳ್ಳುವ ಪ್ರಯತ್ನದಲ್ಲಿದೆ. ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕಾಗಿ ಡಿಎಂಕೆ ಚರ್ಚೆ ನಡೆಸಿದ ಬಳಿಕ ಟಿವಿಕೆಗೆ ಬೆಂಬಲಿಸುವುದಾಗಿ ಘೋಷಿಸಿದೆ.
ಈ ನಡುವೆ ಡಿಎಂಕೆ, ಎಐಎಡಿಎಂಕೆ ಮೈತ್ರಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಅದನ್ನು ಸ್ಟಾಲಿನ್ ತಳ್ಳಿ ಹಾಕಿದ ಬಳಿಕವೂ ಕಾಂಗ್ರೆಸ್‌ನ ವಿರುಧುನಗರ ಸಂಸದ ಮಾಣಿಕಂ ಠ್ಯಾಗೂರ್ ಪುನರುಚ್ಚರಿಸಿದ್ದು, ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಪರಸ್ಪರ ಮೈತ್ರಿಯ ಮಾತುಕತೆಗಳ ಸುಳಿವು ದೊರೆತ ಬಳಿಕವೇ ಕಾಂಗ್ರೆಸ್ ಡಿಎಂಕೆಯಿಂದ ಹೊರಬಂದು ಟಿವಿಕೆಗೆ ಬೆಂಬಲಿಸುವ ನಿರ್ಣಯ ಕೈಗೊಂಡಿದೆ ಎಂದಿದ್ದಾರೆ.
ಸುಮಾರು 4 ದಶಕಗಳ ಬದ್ಧ ವೈರಿಗಳಾಗಿರುವ ಡಿಎಂಕೆ ಮತ್ತು ಎಐಎಡಿಎಂಕೆಯ ಮೈತ್ರಿ ಸಾಧ್ಯತೆಗಳ ಬಗ್ಗೆ ರೊಚ್ಚಿಗೆದ್ದಿರುವ ವಿಜಯ್ ಒಂದು ವೇಳೆ ಅಂತಹ ಬೆಳವಣಿಗೆ ಘಟಿಸಿದರೆ, ತಮ ಪಕ್ಷದ 108 ಶಾಸಕರಿಂದಲೂ ಸಾಮೂಹಿಕ ರಾಜೀನಾಮೆ ಕೊಡಿಸಿ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡುವುದು ಮತ್ತು ಮರು ಚುನಾವಣೆಯ ಸಾಧ್ಯತೆಗಳನ್ನು ಹುಟ್ಟು ಹಾಕುವ ಕಾರ್ಯತಂತ್ರ ರೂಪಿಸಿರುವುದಾಗಿ ಹೇಳಲಾಗಿದೆ.
ಬಹುಮತ ಸಾಬೀತು ಪಡಿಸಬೇಕಿರುವುದು ಶಾಸನ ಸಭೆಯ ಒಳಗೆ ಹೊರತು, ಲೋಕಭವನದಲ್ಲಲ್ಲ ಎಂಬ ಸುಪ್ರೀಂಕೋರ್ಟ್‌ನ ತೀರ್ಪಿನ ಹೊರತಾಗಿಯೂ ತಮಿಳುನಾಡಿನ ರಾಜ್ಯಪಾಲರು ಕೆಲವು ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ವಿಜಯ್ ಅವರಿಗೆ ಸರ್ಕಾರ ರಚಿಸಲು ಬಿಡುತ್ತಿಲ್ಲ ಎಂಬ ಆರೋಪಗಳಿವೆ.
ಕೇಂದ್ರ ಸರ್ಕಾರ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಯೇತರ ಸರ್ಕಾರ ರಚನೆಗೆ ಅಡ್ಡಿ ಪಡಿಸುವುದು ಮತ್ತು ಚಾಲ್ತಿಯಲ್ಲಿರುವ ಸರ್ಕಾರಗಳಿಗೆ ತೊಂದರೆ ಮಾಡುವ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ ಎಂದು ಪ್ರತಿಭಟನೆಯಲ್ಲಿ ಕಾಂಗ್ರೆಸ್ ಟೀಕಿಸಿದೆ.
ಸಂಖ್ಯೆಗಳ ಮೇಲಾಟ:
ಈ ನಡುವೆ ಸಂಖ್ಯಾಬಲಗಳ ಲೆಕ್ಕಾಚಾರ ಜೋರಾಗಿದೆ. ಟಿವಿಕೆ ಸ್ವತಂತ್ರವಾಗಿದ್ದು, 108 ಸ್ಥಾನಗಳನ್ನು ಹೊಂದಿದೆ. ಸರ್ಕಾರ ರಚನೆಗೆ ಅಗತ್ಯವಿರುವ 118 ಸ್ಥಾನಗಳನ್ನು ಗಳಿಸಲು ಇತರ ಪಕ್ಷಗಳ ಮೊರೆ ಹೋಗಿದೆ. ಡಿಎಂಕೆ ಜೊತೆ ಗುರುತಿಸಿಕೊಂಡಿದ್ದ 5 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಈಗಾಗಲೇ ಟಿಎಂಕೆಗೆ ಬೆಂಬಲ ಘೋಷಿಸಿದೆ.
ಸಿಪಿಐ 2, ಸಿಪಿಐಎಂ 2, ವಿಸಿಕೆ 2 ಶಾಸಕರನ್ನು ಹೊಂದಿವೆ. ಈ ಪಕ್ಷಗಳು ಇಂದು ಸಂಜೆ ಸಭೆ ಸೇರಿ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದು ನಡೆದಿದ್ದೇ ಆದರೆ, ಟಿವಿಕೆ ಸರ್ಕಾರ ರಚಿಸಲು ಅಗತ್ಯವಿರುವ ಸರಳ ಬಹುಮತವನ್ನು ಪಡೆಯಲಿದೆ. 119 ಶಾಸಕರ ಪಟ್ಟಿಯನ್ನು ಇಂದು ಸಂಜೆ ಅಥವಾ ನಾಳೆಯೊಳಗೆ ವಿಜಯ್ ರಾಜ್ಯಪಾಲರಿಗೆ ಸಲ್ಲಿಸುವ ಸಾಧ್ಯತೆ ಇದೆ.
ಈ ನಡುವೆ ಜಾತ್ಯತೀತ ನಿಲುವಿನ ಸಿದ್ಧಾಂತ ಹೊಂದಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಎರಡು ಶಾಸಕರನ್ನು ಹೊಂದಿದ್ದು ಬಹುತೇಕ ಟಿವಿಕೆಗೆ ಬೆಂಬಲ ನೀಡುವ ನಿರೀಕ್ಷೆಗಳಿವೆ. ಕ್ಯಾಪ್ಟನ್ ವಿಜಯ್‌ಕಾಂತ್ ಅವರು ಸ್ಥಾಪಿಸಿರುವ ಡಿಎಂಡಿಕೆ ಕಳೆದ ಚುನಾವಣೆಗೂ ಮುನ್ನ ಡಿಎಂಕೆ ಜೊತೆ ಸೇರಿಕೊಂಡಿತ್ತು. ಅತಂತ್ರ ಪರಿಸ್ಥಿತಿಯಲ್ಲಿ ಟಿವಿಕೆಯೊಂದಿಗೆ ಕೈಜೋಡಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಪಕ್ಷಗಳು ಒಟ್ಟಾದರೆ ಮೈತ್ರಿ ಕೂಟ 122 ಶಾಸಕರನ್ನು ಒಳಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇತ್ತ 59 ಶಾಸಕರನ್ನು ಹೊಂದಿರುವ ಡಿಎಂಕೆ ರಚನಾತಕ ವಿರೋಧ ಪಕ್ಷವಾಗಿ ಕೆಲಸ ಮಾಡುವುದಾಗಿ ಘೋಷಿಸಿದೆ. ಒಂದು ವೇಳೆ ಪವಾಡ ಪರಿಸ್ಥಿತಿಯಲ್ಲಿ ಡಿಎಂಕೆ-ಎಐಎಡಿಎಂಕೆ ಪಕ್ಷಗಳು ಒಂದಾದರೂ ಒಟ್ಟು 106 ಶಾಸಕರ ಸಂಖ್ಯಾ ಬಲವಾಗಲಿದೆ. ಎಐಎಡಿಎಂಕೆ (47) ಎನ್‌ಡಿಎ ಮಿತ್ರಕೂಟದಲ್ಲಿದ್ದು, ಬಿಜೆಪಿಯ 1, ಪಿಎಂಕೆಯ 4, ಎಎಂಎಂಕೆಯ ಪಕ್ಷದ 1 ಶಾಸಕರನ್ನು 53 ಸಂಖ್ಯಾ ಬಲ ಜೋಡಣೆಯಾಗಲಿವೆ. ಡಿಎಂಕೆ ಮತ್ತು ಎಐಎಡಿಎಂಕೆ ಮಿತ್ರ ಪಕ್ಷಗಳು ಒಟ್ಟು ಸೇರಿದರೂ 112 ಸಂಖ್ಯಾಬಲವಾಗಲಿದೆ. ಡಿಎಂಕೆ ಜೊತೆಯಲ್ಲಿದ್ದ ಡಿಎಂಡಿಕೆ (1), ಸಿಪಿಐ (2), ಸಿಪಿಐಎಂ (2), ಎಸಿಕೆ (2), ಐಯುಎಂಎಲ್ (2) ಸ್ಥಾನಗಳು ಸೇರಿದರೆ ಆಗ ಡಿಎಂಕೆ ಮತ್ತು ಎಐಎಡಿಎಂಕೆ ಎರಡು ಪಕ್ಷಗಳು ಹಾಗೂ ಅದರ ಮಿತ್ರ ಪಕ್ಷಗಳ ಒಟ್ಟು ಬಲಾಬಲ 121 ಆಗುವ ಲೆಕ್ಕಾಚಾರಗಳಿವೆ.
ಆದರೆ ಕಮ್ಯುನಿಸ್ಟ್ ಪಕ್ಷಗಳು ಹಾಗೂ ಮುಸ್ಲಿಂ ಲೀಗ್ ಬಿಜೆಪಿ ಮಿತ್ರಕೂಟದೊಂದಿಗೆ ಕೈ ಜೋಡಿಸುವ ಸಾಧ್ಯತೆ ಬಗ್ಗೆ ಅನುಮಾನವಿದೆ. ಒಟ್ಟಾರೆ ಇಂದು ಸಂಜೆಯೊಳಗೆ ತಮಿಳುನಾಡಿನ ರಾಜಕೀಯ ಪ್ರಹಸನ ತಾರ್ಕಿಕ ಅಂತ್ಯ ಕಾಣುವ ಚರ್ಚೆಗಳಾಗುತ್ತಿವೆ.
