ಚಿಕ್ಕಮಗಳೂರು,ಏ.10- ವಿದ್ಯಾರ್ಥಿನಿ ಶ್ರೀನಂದಾ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಇದು ಕೊಲೆಯೋ, ಆತಹತ್ಯೆಯೋ ಅಥವಾ ಕಾಲು ಜಾರಿ ಬಿದ್ದಿದ್ದಾರೆಯೇ ಎಂಬ ಪ್ರಶ್ನೆಗಳು ಮೂಡಿವೆ.ಈ ವಿದ್ಯಾರ್ಥಿನಿ ಮೃತದೇಹ ಎರಡು ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದ್ದು, ದೇಹದ ಮೇಲೆ ಗಾಯದ ಗುರುತುಗಳಿವೆ.
ಅಂದು ಈಕೆ ನಾಪತ್ತೆಯಾದಾಗ ಯಾವ ಬಟ್ಟೆ ಧರಿಸಿದ್ದಳೋ ಅದೇ ಬಟ್ಟೆಯಲ್ಲಿ ಮೃತದೇಹ ಪತ್ತೆಯಾಗಿದೆ. ಬಹಳ ಕಡಿದಾದ ಮತ್ತು ಸುಲಭವಾಗಿ ತಲುಪಲಾಗದ ಎರಡು ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಿದ್ದಿದ್ದ ಮೃತದೇಹವನ್ನು ಡ್ರೋನ್ ಕ್ಯಾಮೆರಾಗಳು ಪತ್ತೆಹಚ್ಚುವೆ. ಶ್ರೀನಂದಾ ಮೃತದೇಹವನ್ನು ಪ್ರಪಾತದಿಂದ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.
ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಯಾವ ರೀತಿ ಸಾವನ್ನಪ್ಪಿದ್ದಾಳೆ ಎಂಬುವುದು ಗೊತ್ತಾಗಲಿದೆ.ಹಲವು ಆಯಾಮಗಳಲ್ಲಿ ತನಿಖೆ: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದರು.
ವಿದ್ಯಾರ್ಥಿನಿ ಸಾವಿನ ಬಗ್ಗೆ ಆಕೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ. ಇದು ಕಡಿದಾದ ಅರಣ್ಯ ಪ್ರದೇಶ, ಪ್ರಪಾತದಲ್ಲಿ ಶವ ಬಿದ್ದಿರುವುದರಿಂದ ಮೇಲೆತ್ತುವ ಕಾರ್ಯಾಚರಣೆ ಮುಂದುವರೆದಿದೆ ಎಂದರು. ಪೊಲೀಸ್ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಮಾಡುತ್ತಿವೆ ಎಂದು ಅವರು ಹೇಳಿದರು.
