ಬೆಂಗಳೂರು,ಮೇ9- ನಾಳೆ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರು ಆರ್ಟ್ ಆಫ್ ಲಿವಿಂಗ್ನ ವರ್ಷಾಚರಣೆ, ರವಿಶಂಕರ್ ಗುರೂಜಿಯವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಪ್ರಧಾನಿಗೆ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ವತಿಯಿಂದ ಸನಾನ ಕಾರ್ಯಕ್ರಮ ಹಮಿಕೊಳ್ಳಲಾಗಿದೆ.
ಪ್ರಸಿದ್ಧ ಆಧ್ಯಾತಿಕ ಕೇಂದ್ರವಾಗಿರುವ ಆರ್ಟ್ ಆಫ್ ಲಿವಿಂಗ್ನ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿಯವರ 70ನೇ ವರ್ಷದ ಹುಟ್ಟುಹಬ್ಬ ಆಚರಣೆ ನೆರವೇರಲಿದೆ. ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆಯಲಿದೆ.
ಇದೇ ವೇಳೆ ಆಶ್ರಮದ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಧ್ಯಾನ ಮಂದಿರ ಉದ್ಘಾಟನೆಯಾಗಲಿದ್ದು, ಹಲವು ವಿಶೇಷಗಳನ್ನು ಹೊಂದಿರುವ ಧ್ಯಾನ ಮಂದಿರದ ಅನಾವರಣದ ಜತೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಆರ್ಟ್ ಆಫ್ ಲಿವಿಂಗ್ನ ಈ ನೂತನ ಧ್ಯಾನಮಂದಿರದಲ್ಲಿ ವಾರ್ಲಿ, ಮಧುಬನಿ, ಪಟ್ಟಚಿತ್ತ, ತಂಜಾವೂರು, ಸೋಹ್ರಾಹ್, ಕೊಹ್ಬರ್, ಗೊಂಡ್ ಮತ್ತು ಪಿಚ್ವಾಯಿ ಕಲೆಗಳನ್ನು ಬಳಕೆ ಮಾಡಲಾಗಿದ್ದು, ಈ ಸುಂದರ ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲು ಅಂದಿನಿಂದ ಅವಕಾಶ ಸಿಗಲಿದೆ.
ಮಾನಸಿಕ, ಆಧ್ಯಾತಿಕ ಸಾಧನೆಗಳ ಮೂಲಕ ಜನರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಆರ್ಟ್ ಆಫ್ ಲಿವಿಂಗ್, 45 ವರ್ಷಗಳನ್ನು ಪೂರೈಸುತ್ತಿದ್ದು, ಮೇ 10 ರಿಂದ 25ರವರೆಗೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ನಾನಾ ಕ್ಷೇತ್ರಗಳ ಗಣ್ಯರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಒಂದು ಅಂತರರಾಷ್ಟ್ರೀಯ ಲಾಭರಹಿತ, ಶೈಕ್ಷಣಿಕ ಮತ್ತು ಮಾನವೀಯ ಸೇವಾ ಸಂಸ್ಥೆಯಾಗಿದೆ.ಈ ಸಂಸ್ಥೆಯನ್ನು 1981 ರಲ್ಲಿ ಆಧ್ಯಾತಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಅವರು ಸ್ಥಾಪಿಸಿದರು. ಇದರ ಅಂತರರಾಷ್ಟ್ರೀಯ ಕೇಂದ್ರ (ಆಶ್ರಮ) ಕರ್ನಾಟಕದ ಬೆಂಗಳೂರಿನ ಕನಕಪುರ ರಸ್ತೆಯಲ್ಲಿದೆ. ಇದನ್ನು ೞಪಂಚಗಿರಿೞ (ಐದು ಬೆಟ್ಟಗಳ) ಮಡಿಲಲ್ಲಿ ನಿರ್ಮಿಸಲಾಗಿದೆ. ಒತ್ತಡ ಮುಕ್ತ ಮತ್ತು ಹಿಂಸಾಮುಕ್ತ ಸಮಾಜ ನಿರ್ಮಾಣ ಮಾಡುವುದು ಇದರ ಮುಖ್ಯ ಗುರಿಯಾಗಿದೆ. ಯಾವುದೇ ಜಾತಿ, ಧರ್ಮ, ಅಥವಾ ದೇಶದ ಭೇದವಿಲ್ಲದೆ, ಎಲ್ಲರನ್ನೂ ಒಳಗೊಂಡ ವಸುಧೈವ ಕುಟುಂಬಕಂ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ತತ್ವವನ್ನು ಇದು ಪ್ರತಿಪಾದಿಸುತ್ತದೆ.
ಸುದರ್ಶನ ಕ್ರಿಯೆ ಆರ್ಟ್ ಆಫ್ ಲಿವಿಂಗ್ನ ಅತ್ಯಂತ ಪ್ರಮುಖವಾದ ಮತ್ತು ವಿಶಿಷ್ಟವಾದ ಉಸಿರಾಟದ ತಂತ್ರವಾಗಿದೆ. ಇದು ಉಸಿರಾಟದ ಮೂಲಕ ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಖಿನ್ನತೆ ದೂರವಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿವಿಧ ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಶಿಬಿರಗಳನ್ನು ಆಯೋಜಿಸುತ್ತದೆ.
ಆರ್ಟ್ ಆಫ್ ಲಿಂವಿಂಗ್ ಫೌಂಡೇಷನ್ ಕಳೆದ 45 ವರ್ಷಗಳಲ್ಲಿ ಯೋಗ, ಧ್ಯಾನ ಹಾಗೂ ಆಧ್ಯಾತಿಕ ಶಿಕ್ಷಣದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಮಹತ್ವದ ಪಾತ್ರವಹಿಸಿದೆ. ನದಿ ಪುನರುಜ್ಜೀವನ, ಶಿಕ್ಷಣ ಅಭಿವೃದ್ಧಿ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
150ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿರುವ ಈ ಸಂಸ್ಥೆ, ಮಾನವೀಯ ಮೌಲ್ಯಗಳ ಪ್ರಸಾರ ಹಾಗೂ ಸಮುದಾಯ ಸೇವೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.
ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಧ್ಯಾನ ಮಂದಿರವು ಸ್ತಂಭ-ರಹಿತ ವಿಶಾಲ ಜಾಗವನ್ನು ಹೊಂದಿದ್ದು, ಇತರ ಸಾಮಾನ್ಯ ಕಟ್ಟಡಗಳಿಗಿಂತ ಭಿನ್ನವಾದ ಮೇಲ್ಛಾವಣಿಯನ್ನು ಅಳವಡಿಸಲಾಗಿದೆ. ಏಕಕಾಲಕ್ಕೆ ಸುಮಾರು 2 ಲಕ್ಷ ಜನರು ಸುರಕ್ಷಿತವಾಗಿ ಕುಳಿತುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಒಳಾಂಗಣ ವಿನ್ಯಾಸದ ಬದಲಾಗಿ, ನೈಸರ್ಗಿಕ ಮತ್ತು ಸಂಸ್ಕರಿಸಿದ ಬಿದಿರನ್ನು ಬಳಸಿರುವುದು ಧ್ಯಾನ ಮಂದಿರದ ವಿಶೇಷತೆ.
45ನೇ ವಾರ್ಷಿಕೋತ್ಸವ ಮತ್ತು ಶ್ರೀ ಶ್ರೀ ಗುರೂಜಿ ಜನದಿನದ ಹಿನ್ನೆಲೆಯಲ್ಲಿ ಹಮಿಕೊಂಡಿರುವ ವಿವಿಧ ಕಾರ್ಯಕ್ರಮಗಳು ಮೇ 10 ರಂದು ಪ್ರಾರಂಭವಾಗಿ ಮೇ 25 ರವರೆಗೆ ನಡೆಯಲಿವೆ.
ಬಿಜೆಪಿಯಿಂದ ಸನ್ಮಾನ :
ಬೆಳಿಗ್ಗೆ 9 ಗಂಟೆಗೆ ಮೋದಿ ಅವರು, ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಇದೊಂದು ಸಂಪೂರ್ಣ ಬಿಜೆಪಿ ಕಾರ್ಯಕ್ರಮವಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಜಯಭೇರಿ ಬಾರಿಸಿದ ಬಳಿಕ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಬಿಜೆಪಿ ವತಿಯಿಂದ ಬೃಹತ್ ಅಭಿನಂದನಾ ಸಮಾರಂಭ ಹಮಿಕೊಳ್ಳಲಾಗಿದೆ.
ಇದಕ್ಕಾಗಿ ಮೋದಿ ಅವರ ಕಚೇರಿ ಸುಮಾರು ಅರ್ಧ ಗಂಟೆ ಕಾಲ ಸಮಯ ನಿಗದಿಪಡಿಸಿದೆ. ಮೋದಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಸಾಧಿಸಿದ ಅದ್ಭುತ ಗೆಲುವನ್ನು ಸಂಭ್ರಮಿಸುವುದು ಈ ಸಮಾರಂಭದ ಮುಖ್ಯ ಉದ್ದೇಶವಾಗಿದೆ. ಪ್ರಧಾನಿಯವರ ಆಗಮನದ ಹಿನ್ನೆಲೆ ಬೆಂಗಳೂರು ನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆ ಮತ್ತು ಗುಪ್ತಚರ ವಿಭಾಗ ಸಮನ್ವಯದಿಂದ ಕಾರ್ಯಾಚರಣೆ ನಡೆಸಲಿದೆ.
