Homeರಾಷ್ಟ್ರೀಯತಮಿಳುನಾಡಿನ ಮುಖ್ಯಮಂತ್ರಿಯಾಗಿ ಜೋಸೆಫ್‌ ವಿಜಯ್‌ ಪ್ರಮಾಣ ವಚನ ಸ್ವೀಕಾರ

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜೋಸೆಫ್‌ ವಿಜಯ್‌ ಪ್ರಮಾಣ ವಚನ ಸ್ವೀಕಾರ

Joseph Vijay takes oath as Tamil Nadu Chief Minister

ಚೆನ್ನೈ, ಮೇ 10- ತಮಿಳುನಾಡಿನ ಒಂಬತ್ತನೇ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಸಿ.ಜೋಸೆಫ್‌ ಇಂದು ಪ್ರಮಾಣವಚನ ಸ್ವೀಕರಿಸಿದರು.ರಾಜ್ಯಪಾಲ ರಾಜೇಂದ್ರ ವಿಶ್ವನಾಥ್‌ ಅರ್ಲೇಕರ್‌ ಪ್ರಮಾಣವಚನ ಬೋಧಿಸಿದರು. ವಿಜಯ್‌ ಅವರು ದೇವರ ಹೆಸರಿನಲ್ಲಿ ಗೌಪ್ಯತಾವಿಧಿ ಸ್ವೀಕರಿಸಿ, ಅಧಿಕಾರ ಪಡೆಯುವ ದಸ್ತಾವೇಜುಗಳಿಗೆ ಸಹಿ ಮಾಡಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯ್‌ ಅವರ ಜೊತೆಗೆ ಟಿವಿಕೆ ಪಕ್ಷದ ಎ. ಆನಂದ್‌, ಅಧವ್‌ ಅರ್ಜುನ್‌, ಕೆ.ಎ.ಸೆಂಗೋಟಿಯನ್‌, ಕೆ.ಜೆ.ಅರ್ಜುನ್‌ ರಾಜ್‌, ಪಿ.ವೆಂಕಟರಮಣನ್‌, ಆರ್‌.ನಿರ್ಮಲಕುಮಾರ್‌, ರಾಜಮೋಹನ್‌, ಟಿ.ಕೆ.ಪ್ರಭು, ಎಸ್‌‍. ಕೀರ್ತನಾ ಅವರುಗಳು ಮೊದಲ ಬಾರಿಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ರಾಜ್ಯ ಪಾಲರನ್ನು ವಿಜಯ್‌ ಅವರು ಖುದ್ದಾಗಿ ಹೋಗಿ ಕಾರಿನ ಬಳಿ ಸ್ವಾಗತಿಸಿದ್ದಲ್ಲದೇ ಹೂಗುಚ್ಛ ನೀಡಿ ಶಾಲು ಹೊದಿಸಿ ಸನಾನಿಸಿದರು. ವೇದಿಕೆಯಲ್ಲಿ ತಮ ಸಂಪುಟದ ನೂತನ ಸಚಿವರನ್ನು ರಾಜ್ಯಪಾಲರಿಗೆ ಪರಿಚಯಿಸಿದರು. ಪ್ರಮಾಣವಚನ ಸ್ವೀಕರಿಸಿದ ಬಳಿಕ ನೂತನ ಸಚಿವರು ವಿಜಯ್‌ ಅವರನ್ನು ತಬ್ಬಿ ಧನ್ಯವಾದ ಹೇಳಿದರು.

ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್‌ ಅವರ ತಂದೆ ಚಂದ್ರಶೇಖರ್‌, ತಾಯಿ ಶೋಭಾ, ನಟಿ ತ್ರಿಷಾ ಕ್ರಿಷ್ಣನ್‌, ಬಿಜೆಪಿಯ ರಾಜ್ಯಾಧ್ಯಕ್ಷ ನೈನಾರ್‌ನಾಗೇಂದ್ರನ್‌ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.
ವಿಜಯ್‌ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ತಮಿಳುನಾಡಿನಾದ್ಯಂತ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ ಸಾಮಾಜಿಕ ಜಾಲತಾಣದಲ್ಲಿ ವಿಜಯ್‌ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಜೋಸೆಫ್‌ ವಿಜಯ್‌ ಅವರಿಗೆ ಮುಂದಿನ ಅವಧಿಗೆ ಶುಭವಾಗಲಿ. ಜನರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರದ ಜೊತೆಯಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಜಯ್‌ ಅವರು ನೆಹರೂ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.

ತಂದೆ-ತಾಯಿಗಳ ಹರ್ಷ:
ವಿಜಯ್‌ ಅವರ ತಂದೆ ಹಾಗೂ ನಿರ್ದೇಶಕ ಎಸ್‌‍.ಎ. ಚಂದ್ರಶೇಖರ್‌. ತಮ ಪುತ್ರ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವ ಕ್ಷಣವನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಜಯ್‌ ಅವರ ತಾಯಿ ಶೋಭಾ ಚಂದ್ರಶೇಖರ್‌, ಈ ಸಮಾರಂಭ ಮಾತೃ ದಿನದಂದೇ ನಡೆಯುತ್ತಿರುವುದರಿಂದ ಇದು ಭಾವನಾತಕ ಕ್ಷಣ ಎಂದು ಹೇಳಿದ್ದಾರೆ. ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಕೂಡ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಮಿಳುನಾಡಿನ ರಾಜಕೀಯ ಇತಿಹಾಸ:
1920ರ ಡಿಸೆಂಬರ್‌ 17ರಿಂದಲೂ ಆಡಳಿತಾತಕ ಇತಿಹಾಸ ಹೊಂದಿರುವ ಮದ್ರಾಸ್‌‍ ಪ್ರೆಸಿಡೆನ್ಸಿಗೆ 1949ರ ಏಪ್ರಿಲ್‌ 6ರ ವರೆಗೂ 11 ಜನ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದರು.
ಮದ್ರಾಸ್‌‍ ರಾಜ್ಯ ರಚನೆಯಾದ ಬಳಿಕ 1950ರ ಜನವರಿ 26ರಿಂದ 1963ರ ಅಕ್ಟೋಬರ್‌ 2ರ ವರೆಗೂ ಕಾಂಗ್ರೆಸ್‌‍ನ ನಾಲ್ವರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದರು.

1967ರ ನಂತರ ಆರಂಭವಾದ ಪ್ರಾದೇಶಿಕ ಅಸಿತೆ ರಾಷ್ಟ್ರೀಯ ಪಕ್ಷಗಳನ್ನು ಧೂಳೀಪಟ ಮಾಡಿತ್ತು. ಸಿ.ಎನ್‌.ಅಣ್ಣಾ ದೊರೈ 1967ರ ಮಾರ್ಚ್‌ 6 ರಂದು ಡಿಎಂಕೆ ಪಕ್ಷದಿಂದ ಮೊದಲ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದರು. ಅದೇ ವರ್ಷ ಜನವರಿ 14ರಂದು ತಮಿಳುನಾಡು ರಾಜ್ಯ ರಚನೆಯಾಗಿತ್ತು. ಮುಖ್ಯಮಂತ್ರಿಯಾಗಿ ಮುಂದುವರೆದ ಅಣ್ಣಾದೊರೈ 1969ರ ಫೆಬ್ರವರಿ 3 ರಂದು ನಿರ್ಗಮಿಸಿದ್ದರು.
1969ರ ಫೆಬ್ರವರಿ 10 ರಂದು ಕೆ.ಕರುಣಾನಿಧಿ ಅಧಿಕಾರ ಸ್ವೀಕರಿಸಿದರು. ಸುಮಾರು 7 ವರ್ಷ ಆಡಳಿತ ನಡೆಸಿದ ಅವರು 1977ರ ಚುನಾವಣೆಯಲ್ಲಿ ಸೋಲು ಕಂಡರು.

ಆಗಿನ ಸೂಪರ್‌ಸ್ಟಾರ್‌ ಎಂ.ಜಿ.ರಾಮಚಂದ್ರನ್‌ ಎಐಎಡಿಎಂಕೆ ರಚನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ 3 ವರ್ಷದಲ್ಲೇ ವಿಧಾನಸಭೆ ವಿಸರ್ಜನೆಯಾಗಿತ್ತು. ಮತ್ತೆ 1980ರಲ್ಲಿ ಎಂ.ಜಿ. ರಾಮಚಂದ್ರನ್‌ ಅಧಿಕಾರಕ್ಕೆ ಮರಳಿದ್ದರು. ಅವರ ಪತ್ನಿ ವಿ.ಎನ್‌. ಜಾನಕಿ 1988ರಲ್ಲಿ 23 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಒಂದು ವರ್ಷ ರಾಷ್ಟ್ರಪತಿ ಆಡಳಿತ ಬಳಿಕ, 1989ರಲ್ಲಿ ಎಂ.ಕರುಣಾನಿಧಿ ಮರಳಿದ್ದರು. ಅನಂತರ ಡಿಎಂಕೆ, ಎಐಎಡಿಎಂಕೆ ಪಕ್ಷಗಳ ಆಧಿಪತ್ಯಗಳೇ ಮುಂದುವರೆದಿದ್ದವು. ನಂತರದಲ್ಲಿ ಜೆ.ಜಯಲಲಿತಾ, ಪನ್ನೀರ್‌ ಸೆಲ್ವಂ, ಎಡಪಾಡಿ ಕೆ.ಪಳನಿಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು. ಎಂ.ಕೆ.ಸ್ಟಾಲಿನ್‌ 2021ರಿಂದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.

21 ತಿಂಗಳ ಹಿಂದೆ ದಳಪತಿ ಸಿ.ಜೋಸೆಫ್‌ ವಿಜಯ್‌, ಟಿವಿಕೆ ಸ್ಥಾಪಿಸಿದ್ದರು. ಹಲವು ಸವಾಲುಗಳ ನಂತರವೂ ತಮಿಳುನಾಡಿನ ಜನ ಟಿವಿಕೆಗೆ 108 ಕ್ಷೇತ್ರಗಳಲ್ಲಿ ಶಾಸಕರನ್ನು ಗೆಲ್ಲಿಸಿದ್ದರು.ಮೇ 5ರಂದು ಫಲಿತಾಂಶ ಪ್ರಕಟವಾದರೂ ಸಂಖ್ಯಾಬಲದ ಕೊರತೆ ನೆಪವೊಡ್ಡಿ ತಮಿಳು ನಾಡಿನ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಸರ್ಕಾರ ರಚನೆಗೆ ಅವಕಾಶ ನೀಡಿರಲಿಲ್ಲ.

ಕಾಂಗ್ರೆಸ್‌‍ 5, ಸಿಪಿಐಎಂ, ಸಿಪಿಐ, ವಿಸಿಕೆ, ಐಯುಎಂನ ತಲಾ 2 ಸೇರಿ ಒಟ್ಟು 121 ಶಾಸಕರ ಸಂಖ್ಯಾ ಬಲವನ್ನು ನಿನ್ನೆ ವಿಜಯ್‌ ಅವರು ರಾಜ್ಯಪಾಲರಿಗೆ ಅರಿವು ಮಾಡಿ ಕೊಟ್ಟ ಬಳಿಕ ಮೇ 13ರ ಒಳಗೆ ಬಹುಮತ ಸಾಬೀತುಪಡಿಸುವ ಷರತ್ತಿಗೊಳಪಟ್ಟು ವಿಜಯ್‌ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿದರು.ಇಂದು ಬೆಳಗ್ಗೆ ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನೆರೆದಿದ್ದ ಭಾರಿ ಜನಸ್ತೋಮದ ನಡುವೆ ವಿಜಯ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ಅವರೊಂದಿಗೆ 9 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ 57 ವರ್ಷಗಳ ಬಳಿಕ ಹೊಸ ರಾಜಕೀಯ ಯುಗ ಆರಂಭವಾಗಿದೆ.

RELATED ARTICLES

Latest News