Homeಇದೀಗ ಬಂದ ಸುದ್ದಿಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಇನ್ನಿಲ್ಲ : ಗಣ್ಯರ ಸಂತಾಪ

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಇನ್ನಿಲ್ಲ : ಗಣ್ಯರ ಸಂತಾಪ

Karnataka’s Planning Minister D Sudhakar passes away

ಬೆಂಗಳೂರು, ಮೇ 10- ರಾಜ್ಯ ಸರ್ಕಾರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ.ಸುಧಾಕರ್‌ (66) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಮಂಡಿ ನೋವಿನ ಕಾರಣಕ್ಕಾಗಿ ಕಳೆದ ತಿಂಗಳು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಅವರಿಗೆ, ಎರಡು ದಿನಗಳ ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತೀವ್ರ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಎಲೆಕ್ಟ್ರಾನಿಕ್‌ ಸಿಟಿಯ ಕೃಷ್ಣ ಇನ್ಸ್ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್‌್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಲವು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮುಂಜಾನೆ 3.15ಕ್ಕೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಆರ್‌. ಚಿನ್ನಿದೊರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಅಧಿಕಾರದಲ್ಲಿದ್ದಾಗಲೇ ನಿಧನರಾದ ಡಿ.ಸುಧಾಕರ್‌ ಅವರಿಗೆ ನಾಡಿನಾದ್ಯಂತ ಅಭಿಮಾನಿಗಳು, ಜನ ಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ.

1961ರ ಮಾರ್ಚ್‌ 28ರಂದು ಚಳ್ಳಕೆರೆಯಲ್ಲಿ ಜನಿಸಿದ್ದ ದಶರಥಯ್ಯ ಸುಧಾಕರ್‌ 2004ರಲ್ಲಿ ಚಿತ್ರದುರ್ಗ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌‍ ಶಾಸಕರಾಗಿ ಆಯ್ಕೆಯಾಗಿದ್ದರು.2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ ಚಳ್ಳಕೆರೆ ಎಸ್‌‍ಟಿ ಮೀಸಲು ಕ್ಷೇತ್ರವಾಯಿತು.

ಅಲ್ಲಿಂದ ಹಿರಿಯೂರು ಕ್ಷೇತ್ರಕ್ಕೆ ವಲಸೆ ಹೋದ ಸುಧಾಕರ್‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಯಡಿಯೂರಪ್ಪ ಅವರ ಸರ್ಕಾರಕ್ಕೆ ಆ ಸಂದರ್ಭದಲ್ಲಿ ಸ್ಪಷ್ಟ ಬಹುಮತ ಬರದ ಹಿನ್ನೆಲೆಯಲ್ಲಿ, ಪಕ್ಷೇತರ ಶಾಸಕರಾಗಿದ್ದ ಡಿ.ಸುಧಾಕರ್‌, ಪಿ.ಎಂ.ನರೇಂದ್ರಸ್ವಾಮಿ, ಶಿವರಾಜ ತಂಗಡಗಿ, ವೆಂಕಟರಮಣಪ್ಪ ಅವರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಆ ವೇಳೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಡಿ.ಸುಧಾಕರ್‌ ಸಮಾಜ ಕಲ್ಯಾಣ ಸಚಿವರಾಗಿ 2008ರಿಂದ 2009ರ ವರೆಗೂ ಕೆಲಸ ಮಾಡಿದ್ದರು.

ನಂತರ 2010ರಿಂದ 11ರವೆಗೂ ಯುವಜನ ಸೇವೆ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. 2013ರಲ್ಲಿ ಹಿರಿಯೂರು ಕ್ಷೇತ್ರದಿಂದ ಕಾಂಗ್ರೆಸ್‌‍ ಶಾಸಕರಾಗಿ 71 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದರು. 2018ರಲ್ಲಿ ಬಿಜೆಪಿಯ ಕೆ.ಪೂರ್ಣಿಮಾ ಅವರ ಎದುರು ಸೋಲು ಕಂಡರು. 2023ರಲ್ಲಿ ಮರು ಆಯ್ಕೆಯಾಗಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ ಕೆಲಸ ಮಾಡಿದ್ದರು.

ಸುಧಾಕರ್‌ ಅವರು ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿದ್ದರು. ಜೊತೆಗೆ ಕೆಲವು ಹಣ ಕಾಸಿನ ವ್ಯವಹಾರ, ಬ್ಯಾಂಕ್‌ ವಂಚನೆ, ಆಸ್ತಿ ವಿವಾದ ಸೇರಿದಂತೆ ವಿವಾದಗಳಿಗೂ ಗುರಿಯಾಗಿದ್ದರು.ಸುಧಾಕರ್‌ ಅವರು, ಪತ್ನಿ, ಪುತ್ರ ಸುಹಾಸ್‌‍ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಸಂತಾಪ:
ಸುಧಾಕರ್‌ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನಾನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೆ. ಅವರು ಗುಣಮುಖರಾಗುವ ಭರವಸೆ ನನ್ನಲ್ಲಿ ಮೂಡಿತ್ತು ಎಂದಿದ್ದಾರೆ.

ಜನ ಸೇವೆಯಲ್ಲಿ ಅಪಾರ ಕಾಳಜಿ ಮತ್ತು ಬದ್ಧತೆ ಹೊಂದಿದ್ದ ಸುಧಾಕರ್‌ ಅವರು ಇನ್ನಷ್ಟು ಕಾಲ ಜನರ ನಡುವೆ ಇರಬೇಕಿತ್ತು. ವೈದ್ಯರ ನಿರಂತರ ಪ್ರಯತ್ನ. ನಮೆಲ್ಲ ಹಾರೈಕೆಯ ಹೊರತಾಗಿಯೂ ಅವರು ನಮನ್ನು ಅಗಲಿದ್ದಾರೆ. ಅವರ ಆತಕ್ಕೆ ಚಿರಶಾಂತಿ ಸಿಗಲಿ ಎಂದಿದ್ದಾರೆ.ಮುಖ್ಯಮಂತ್ರಿಯವರು ಬೆಳಗ್ಗೆ ಸುಧಾಕರ್‌ ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸುಧಾಕರ್‌ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶೋಕಿಸಿದ್ದಾರೆ.

ಸರ್ಕಾರಿ ರಜೆ:
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುಧಾಕರ್‌ ಅವರ ಗೌರವಾರ್ಥ ಮೇ 11 ರಂದು ಚಿತ್ರದುರ್ಗ ಜಿಲ್ಲೆಯ ಸಾರ್ವಜನಿಕ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ, ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಮೇ 10 ರಿಂದ 12ರವರೆಗೆ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರಾದ ಕೃಷ್ಣಭೈರೇಗೌಡ ಮತ್ತಿತರರು ಅಂತಿಮ ದರ್ಶನ ಪಡೆದರು. ಬಳಿಕ 12 ಗಂಟೆಯಿಂದ 4 ಗಂಟೆಯವರೆಗೂ ಹಿರಿಯೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಚಳ್ಳಕೆರೆಯ ಸ್ವ ಗೃಹದಲ್ಲಿ ಪೂಜೆ ವಿಧಿ-ವಿಧಾನಗಳನ್ನು ನೆರವೇರಿಸಿ, ಚಳ್ಳಕೆರೆಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಾಳೆ ಮಧ್ಯಾಹ್ನ 3 ರಿಂದ 4 ಗಂಟೆವರೆಗೂ ಚಳ್ಳಕೆರೆಯಲ್ಲಿ ಜೈನ ಸಮುದಾಯದ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ.

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ರಾಜ್ಯ ಸಚಿವರುಗಳಾದ ಚೆಲುವರಾಯ ಸ್ವಾಮಿ, ಈಶ್ವರ್‌ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್‌, ಎಂ.ಬಿ.ಪಾಟೀಲ್‌, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News