ಬೇಲೂರು, ಏ.12- ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಬೆಳಗಿನ ಜಾವ ನಡೆದಿದೆ. ತಾಲ್ಲೂಕಿನ ಅರೇಹಳ್ಳಿ ಹೋಬಳಿ ಕಣಗುಪ್ಪೆ ಗ್ರಾಮದ ರಾಜಶೆಟ್ಟಿ (ರಾಮಶೆಟ್ಟಿ 60) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ರಾಜಶೆಟ್ಟಿ ಅವರು ಮನೆಯ ಮುಂಭಾಗದ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಬಂದ ಕಾಡಾನೆ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ್ದಲ್ಲದೆ ತುಳಿದು ಮೃತದೇಹವನ್ನು ಎತ್ತುಕೊಂಡು ಹೋಗಿ ತೋಟದೊಳಕ್ಕೆ ಎಸೆದು ಹೋಗಿದೆ.
ಸ್ಥಳೀಯರ ಪ್ರತಿಭಟನೆ:
ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಶೀಘ್ರವೇ ಕಾಡಾನೆ ಗಳನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿ ಗಳನ್ನು ಆಗ್ರಹಿಸಿದ್ದಾರೆ. ತಾಲೂಕಿನ ಮಲೆನಾಡು ಪ್ರಾಂತ್ಯದಲ್ಲಿ ಈಗಾಗಲೇ ಕಳೆದ ನಾಲ್ಕೈದು ವರ್ಷದಿಂದಲೂ ಆನೆಗಳ ಹಾವಳಿಯಿಂದ ಇಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ.
ವಿಶೇಷವೆಂದರೆ ಕಳೆದ ಒಂದು ತಿಂಗಳಿನಿಂದ ಸುಮಾರು 50ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಈ ಭಾಗದ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮತ್ತು ಕೂಲಿ ಕಾರ್ಮಿಕರ ಮೇಲೆ ದಾಳಿಯ ಘಟನೆಗಳು ನಡೆದಿವೆ.
ಕಳೆದ ವರ್ಷ ಕಣಗುಪ್ಪೆ ಸಮೀಪದ ಬೆಳ್ಳಾವರ ಗ್ರಾಮದಲ್ಲಿ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಆದರೆ, ಇಂದು ಭಾನುವಾರ ಬೆಳಗ್ಗೆ ಮನೆ ಮುಂದೆಯೇ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಶಾಶ್ವತವಾಗಿ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವಂತೆ ಒತ್ತಾಯಿಸಿ, ಹತ್ತಾರು ಬಾರಿ ಪ್ರತಿಭಟನೆ, ರಸ್ತೆ ತಡೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಲೆನಾಡಿಗರ ಜೀವನ ಅತ್ಯಂತ ಕಷ್ಟಕರವಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾಡಾನೆಗಳನ್ನು ತಾಲೂಕಿನಿಂದಲೇ ಶಾಶ್ವತವಾಗಿ ಸ್ಥಳಾಂತರಿಸಬೇಕು.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆ ಮುಂದೆ ಅಹೋರಾತ್ರಿ ಪ್ರತಿಭಟನೆ ಮಾಡಬೇಕಾಗುತ್ತದೆ. ಸ್ಥಳಕ್ಕೆ ಸಚಿವರು, ಅಧಿಕಾರಿಗಳು ಆಗಮಿಸುವವರೆಗೆ ಶವ ಎತ್ತಲು ಬಿಡುವುದಿಲ್ಲ ಎಂದು ಟಿಎಪಿಸಿಎಂಎಸ್ ಮಾಜಿ ಉಪಾಧಕ್ಷ ಕಣಗುಪ್ಪೆ ಕುಮಾರ್ ತಿಳಿಸಿದ್ದಾರೆ.
