ಬೆಂಗಳೂರು,ಏ.13- ಕರ್ನಾಟಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುವ ವಿವಿಧ ವರ್ಗದ ಶಿಕ್ಷಕರ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ- 2026ರ ಜಾರಿಗೆ ಸಂಬಂಧಿಸಿದಂತೆ 2026 ಏಪ್ರಿಲ್ 10ರಂದು ಅಧಿಸೂಚನೆ ಹೊರಡಿಸಿತ್ತು. ಈ ವಿಧೇಯಕಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಶಿಕ್ಷಕರ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ ಆಗಿದೆ. ಶಾಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ, ತುರ್ತು ಸೇವಾ ಗುಂಪು ಎಂದು ಪರಿಗಣಿಸಿ ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿ ರಾಜ್ಯ ಪತ್ರ ಹೊರಡಿಸಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ವಿಧಾನಸಭೆಯಲ್ಲಿ ನಡೆದ ಅಧಿವೇಶನ ವೇಳೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ- 2026 ಮಸೂದೆ ಮಂಡಿಸಿತ್ತು. ಅದಕ್ಕೆ ರಾಜ್ಯಪಾಲರ ಅಂತಿಮ ಅಂಕಿತ ಬಾಕಿ ಇತ್ತು. ಅದೀಗ ನೆರವೇರಿದ್ದು, ವಿಧೇಯಕ ಜಾರಿಗೊಳಿಸಲಾಗಿದೆ.
12 ವರ್ಷ ಸೇವೆ, ಕೌನ್ಸೆಲಿಂಗ್ ಮಾಡಿ ವರ್ಗಾವಣೆ :
ರಾಜ್ಯ ಸರ್ಕಾರದ ಪ್ರಕಾರ, ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯ, ಪಿಎಂಶ್ರೀಗಳು ಎಂದು ಮೂರು ವರ್ಗಗಳನ್ನಾಗಿ ಮಾಡಲಾಗಿದೆ. ಇಲ್ಲಿರುವ ಶಿಕ್ಷಕರು ಕನಿಷ್ಠ 12 ವರ್ಷ ಒಂದೇ ಕಡೆ ಕರ್ತವ್ಯ ನಿರ್ವಹಿಸಿರಬೇಕು. ಬಳಿಕ ಅವರಿಗೆ ಕೌನ್ಸೆಲಿಂಗ್ ನಡೆಸುವ ಮೂಲಕ ವರ್ಗಾವಣೆಗೆ ಅವಕಾಶ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ.
ಇನ್ನೂ ಬೋಧಕೇತರ ಹುದ್ದೆಗಳಿಗೆ ಶಿಕ್ಷಕರ ನೇಮಕಕ್ಕೆ ನಿರ್ಬಂಧ ವಿಧಿಸಲಾಗಿದೆ. ಗರ್ಭಿಣಿ ಅಥವಾ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿರುವ ಶಿಕ್ಷಕಿಯರು ಬಯಸಿದ ಸ್ಥಳ ಆಯ್ಕೆಗೆ ಆದ್ಯತೆ ನೀಡಲಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ಹಿತ ಕಾಯುವುದೇ ಈ ವಿಧೇಯಕದ ಉದ್ದೇಶವಾಗಿದೆ.
ವರ್ಗಾವಣೆ ನಿಯಮಗಳು :
*ನಿರ್ಣಾಯಕ ಹುದ್ದೆಗಳು (ಸಿಎ) ಎಂದರೆ ಮತ್ತು ಪದವಿ-ಪೂರ್ವ ಕಾಲೇಜಿನ ಉಪನ್ಯಾಸಕರನ್ನೊಳಗೊಂಡಂತೆ ಈ ಮುಂದಿನ ಪ್ರವರ್ಗಗಳ ಎಲ್ಲಾ ಬೋಧಕ ಹುದ್ದೆಗಳನ್ನು ಒಳಗೊಳ್ಳುವುದು.
*ಪ್ರವರ್ಗ 1: ಮುಖ್ಯೋಪಾಧ್ಯಾಯರು ಅಥವಾ ಉಪ-ಪ್ರಾಂಶುಪಾಲರನ್ನು ಹೊರತುಪಡಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯ, ಪಿಎಂಶ್ರೀ ಶಾಲೆಗಳು.
ಪ್ರವರ್ಗ 2:
ಮುಖ್ಯೋಪಾಧ್ಯಾಯರು ಅಥವಾ ಉಪ-ಪ್ರಾಂಶುಪಾಲರನ್ನು ಹೊರತುಪಡಿಸಿ, 250 ವಿದ್ಯಾರ್ಥಿಗಳನ್ನು ಮೀರಿದ ಅಥವಾ ಕಾಲಕಾಲಕ್ಕೆ ಸರ್ಕಾರವು ಅಧಿಸೂಚಿಸಲಾದ ದಾಖಲಾತಿ ಮಿತಿಯ ಪ್ರಕಾರ ದಾಖಲಾತಿಯನ್ನು ಹೊಂದಿರುವ ಎಲ್ಲಾ ಇತರ ಶಾಲೆಗಳು ಹಾಗೂ ಸರ್ಕಾರಿ ಪದವಿ-ಪೂರ್ವ ಕಾಲೇಜುಗಳು.
ಪ್ರವರ್ಗ 3: ಪ್ರವರ್ಗ 1 ಮತ್ತು 2ರಲ್ಲಿನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಉಪ-ಪ್ರಾಂಶುಪಾಲರು ಅಥವಾ ಸರ್ಕಾರಿ ಪದವಿ-ಪೂರ್ವ ಕಾಲೇಜುಗಳ ಪ್ರಾಂಶುಪಾಲರು.
ಅನುಸೂಚಿಯಲ್ಲಿ ತಿಳಿಸಿದಂತೆ ನಿರ್ದಿಷ್ಟ ಪಡಿಸಿದ ಹುದ್ದೆಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾತ್ರ ನಡೆಸಬೇಕು. ಅದಕ್ಕಾಗಿ ಶಾಲೆಗಳು/ಕಾಲೇಜುಗಳಲ್ಲಿನ ಸ್ಥಾನಿಕ ಪ್ರಸ್ತುತ ವೃಂದದಲ್ಲಿ ಸಲ್ಲಿಸಿರುವ ಕನಿಷ್ಠ ಸೇವಾವಧಿಯು ಹನ್ನೆರಡು ನಿರಂತರ ವರ್ಷಗಳಾಗಿರತಕ್ಕದ್ದು ಎಂದು ಷರತ್ತನ್ನು ಸರ್ಕಾರ ವಿಧಿಸಿದೆ.
