ಬೆಂಗಳೂರು,ಮೇ 11- ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಅರ್ಹ ಪ್ರತಿಭಾವಂತ ನಿರುದ್ಯೋಗಿಗಳ ಪಾಲಿಗೆ ಕಲ್ಪವೃಕ್ಷವಾಗುವ ಬದಲು ಪಾಪಾಸುಕಳ್ಳಿಯಾಗಿ ಲಕ್ಷಾಂತರ ನಿರುದ್ಯೋಗಿಗಳ ಭವ್ಯ ಭವಿಷ್ಯವನ್ನು ಅತಂತ್ರ ಸ್ಥಿತಿಗೆ ಸಿಲುಕಿಸಿದ ಕರಾಳ ಇತಿಹಾಸವನ್ನು ಅಂಟಿಸಿಕೊಂಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಸಮಾಧಾನ ಹೊರಹಾಕಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರ ಈ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿ 56,432 ಹುದ್ದೆಗಳ ಭರ್ತಿಗೆ ಮೀನಾಮೇಷ ಎಣಿಸದೇ ಅಧಿಸೂಚನೆ ಹೊರಡಿಸಿ ಅತೀ ಶೀಘ್ರದಲ್ಲಿ ನ್ಯಾಯೋಚಿತವಾಗಿ ಅಭ್ಯರ್ಥಿಗಳ ಆಯ್ಕೆ ಆಗುವಂತೆ ಕಾಳಜಿ ಪ್ರದರ್ಶಿಸಲಿ. ಇಲ್ಲವಾದರೆ ಸದ್ಯ ಈಗಾಗಲೇ ಹತಾಶೆಯ ಅಂಚಿನಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳ ಆಕ್ರೋಶ ಆಸ್ಫೋಟವಾಗಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ನಿರುದ್ಯೋಗಿ ಯುವಜನರ ಬೃಹತ್ ಪ್ರತಿಭಟನೆಗೆ ಮಣಿದು 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಆದರೆ ಈ ಸಂಬಂಧ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರಿ ಯಂತ್ರವನ್ನು ಸಮರ್ಥವಾಗಿ ನಿಭಾಯಿಸಲು ಅರ್ಹ ಅಧಿಕಾರಿಗಳನ್ನು ನೇಮಿಸುವ ಸಾಂವಿಧಾನಿಕ ಹೊಣೆ ಹೊತ್ತಿರುವ ಲೋಕಸೇವಾ ಆಯೋಗ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದರಲ್ಲಿ ವಿಫಲವಾಗಿ ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ ಹಾಗೂ ದೋಷಪೂರಿತ ಪ್ರಕ್ರಿಯೆಗಳಿಂದ ಕುಖ್ಯಾತಿ ಪಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆಯೋಗದ ಈ ದುರವಸ್ಥೆಗೆ ಅಂಕುಶ ಹಾಕಲು ಆಯೋಗದ ವಿರುದ್ಧದ ನ್ಯಾಯಾಲಯದ ಅನೇಕ ತೀರ್ಪುಗಳು ಭ್ರಷ್ಟ ವ್ಯವಸ್ಥೆಯನ್ನು ಬಯಲು ಮಾಡಿದೆ. ಕೆಲ ತಪ್ಪಿತಸ್ಥರ ಮುಖವಾಡಗಳು ಕೂಡ ಕಳಚಿ ಬಿದ್ದಿವೆ. ಇಷ್ಟಾಗಿಯೂ ಆಯೋಗದ ವ್ಯವಸ್ಥೆಗೆ ಕಾಯಕಲ್ಪ ನೀಡುವ ಪ್ರಯತ್ನ ಈವರೆವಿಗೂ ಸಾಧ್ಯವಾಗಿಲ್ಲ, ಸದ್ಯ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಭ್ಯರ್ಥಿಗಳ ಆಯ್ಕೆಗೆ ಸುಧಾರಣೆಗಳನ್ನು ತರುವುದಾಗಿ ಆಯೋಗದ ಮೂಲಗಳು ತಿಳಿಸಿವೆ.
ಆದರೆ ಇದನ್ನು ನಂಬುವ ಮನಃಸ್ಥಿತಿಯನ್ನು ಉದ್ಯೋಗಾಕಾಂಕ್ಷಿಗಳು ಕಳೆದುಕೊಂಡಿದ್ದಾರೆ. ಆದಾಗ್ಯೂ ಈ ನಿಟ್ಟಿನಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ ಇನ್ನಾದರೂ ಪಾರದರ್ಶಕತೆ ಕಾಯ್ದುಕೊಂಡು ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿಕೊಂಡು ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸುಭದ್ರ ವ್ಯವಸ್ಥೆ ರೂಪಿಸಿಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಆಯೋಗದ ಅಸ್ತಿತ್ವವನ್ನು ಪ್ರಶ್ನಿಸುವ ಪರಿಸ್ಥಿತಿ ಉದ್ಭವವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
