ಬೆಂಗಳೂರು,ಮೇ 11- ಬಹುನಿರೀಕ್ಷಿತ ಹಾಗೂ ಹಲವಾರು ಕಾರಣಗಳಿಂದ ಪದೇಪದೇ ಮುಂದೂಡಲಾಗಿದ್ದ ಜಿಬಿಎ ಚುನಾವಣೆಗೆ ಯಾವುದೇ ಸಂದರ್ಭದಲ್ಲೂ ಚುನಾವಣಾ ಆಯೋಗವು ದಿನಾಂಕ ಘೋಷಣೆ ನಿಗದಿಪಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ರಣತಂತ್ರಗಳ ಬಗ್ಗೆ ಚರ್ಚಿಸಲು ಬಿಜೆಪಿ ಇದೇ ಶುಕ್ರವಾರದಂದು ಮಹತ್ವದ ಸಭೆ ನಡೆಸಲಿದೆ.
ಜಿಬಿಎ ಚುನಾವಣೆ ಗೆಲ್ಲಲೇಬೇಕೆಂದು ದೆಹಲಿ ಬಿಜೆಪಿ ನಾಯಕರು ರಾಜ್ಯಘಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಲ್ಲಿ ಗೆಲುವು ಸಾಧಿಸಿದರೆ 2027ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ಮುನ್ನುಡಿ ಬರೆಯಲಿದೆ ಎಂಬುದು ಬಿಜೆಪಿ ಚಿಂತಕರ ಚಾವಡಿಯ ಲೆಕ್ಕಾಚಾರವಾಗಿದೆ.
ಹೀಗಾಗಿಯೇ ಬರಲಿರುವ ಜಿಬಿಎ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಪಕ್ಷವು ಮೇ 15ರಂದು ಬೆಂಗಳೂರು ನಗರ ಶಾಸಕರು, ಸಂಸದರು ಹಾಗೂ ಪ್ರಮುಖ ಮುಖಂಡರೊಂದಿಗೆ ವಿಶೇಷ ಸಮಾಲೋಚನಾ ಸಭೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಜಿಬಿಎ ಚುನಾವಣಾ ಉಸ್ತುವಾರಿ ರಾಮ್ ಮಾಧವ್ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ , ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬೆಂಗಳೂರನ್ನು ಪ್ರತಿನಿಧಿಸುವ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಡಾ.ಸಿ.ಎನ್.ಮಂಜುನಾಥ್, ಡಾ.ಕೆ.ಸುಧಾಕರ್, ಶಾಸಕರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿ ಹಿರಿಯ ಮಾರ್ಗದರ್ಶನದಲ್ಲಿ ರಾಜ್ಯ ಮಟ್ಟದ ಚುನಾವಣಾ ರಣತಂತ್ರವನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ವಾರ್ಡ್ ಮಟ್ಟದ ತಂತ್ರ, ಸ್ಥಳೀಯ ಸಮಸ್ಯೆಗಳ ಮೇಲೆ ಜನಾಭಿಪ್ರಾಯ ನಿರ್ಮಾಣ ಹಾಗೂ ಆಡಳಿತ ವಿರೋಧಿ ಅಂಶಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಆಳವಾದ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಮೂಲಗಳ ಪ್ರಕಾರ, ಜೆಡಿಎಸ್ ಜೊತೆ ಮೈತ್ರಿ ಸಾಧ್ಯತೆಯ ಕುರಿತು ಅನೌಪಚಾರಿಕ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದ್ದು, ಬೆಂಗಳೂರು ನಗರದಲ್ಲಿ ಜೆಡಿಎಸ್ ಮತಬ್ಯಾಂಕ್ ಸೀಮಿತವಾಗಿದ್ದರೂ ಕೆಲವು ಕ್ಷೇತ್ರಗಳಲ್ಲಿ ಅವರ ಬೆಂಬಲ ನಿರ್ಣಾಯಕವಾಗಬಹುದು ಎಂದು ಬಿಜೆಪಿ ನಾಯಕರು ಅಂದಾಜಿಸುತ್ತಿದ್ದಾರೆ.
ಪಾಲಿಕೆಯ ಕೆಲವು ಕಡೆ ಮೈತ್ರಿ, ಉಳಿದ ಕಡೆ ಫ್ರೆಂಡ್ಲಿ ಫೈಟ್ ನಡೆಸುವ ಬಗ್ಗೆಯೂ ಚಿಂತನೆ ನಡೆದಿದೆ. ಶತಾಯಗತಾಯ ಜಿಬಿಎ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ತನ್ನೆಲ್ಲಾ ಶಕ್ತಿಯನ್ನು ಧಾರೆ ಎರೆಯಲು ಮುಂದಾಗಿದೆ.
ಬೆಂಗಳೂರಿನಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿಗೆ ಮತದಾರ ಕೈಹಿಡಿದ ನಿದರ್ಶನಗಳಿವೆ. ವಿಧಾನಸಭೆ, ಲೋಕಸಭೆ, ಪಾಲಿಕೆ ಸೇರಿದಂತೆ ಎಲ್ಲಾ ಹಂತದ ಚುನಾವಣೆಯಲ್ಲೂ ನಗರದ ಮತದಾರ ಕಮಲ ಪಕ್ಷಕ್ಕೆ ಜೈ ಎಂದಿರುವುದು ಹಿಂದಿನ ಫಲಿತಾಂಶದಿಂದಲೇ ಸಾಬೀತಾಗುತ್ತದೆ.
ಇದರ ಜೊತೆಗೆ ಭಾನುವಾರವಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಹಾಗೂ ನಗರ ಮಟ್ಟದ ಬಿಜೆಪಿ ನಾಯಕರೊಂದಿಗೆ ನಡೆದ ಸಂವಾದದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಬಿಜೆಪಿ ತನ್ನ ಸಂಘಟನೆ ಹಾಗೂ ಚುನಾವಣಾ ತಂತ್ರವನ್ನು ಇನ್ನಷ್ಟು ಬಲಪಡಿಸಿದೆ.
ಪಕ್ಷದ ಕಾರ್ಯಕರ್ತರಿಗೆ ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಮನೆಮನೆಗೆ ಸಂಪರ್ಕ ಅಭಿಯಾನ ಆರಂಭಿಸಲು ಸೂಚನೆ ನೀಡಲಾಗಿದೆ.ಮೇ 15ರ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಹೋಗಲಿದ್ದು, ನಾವು ಈಗಾಗಲೇ ಕ್ಷೇತ್ರ ಮಟ್ಟದ ಸಮಿತಿಗಳನ್ನು ರಚಿಸಿದ್ದೇವೆ, ಪ್ರತಿ ಕ್ಷೇತ್ರದಿಂದ ಮೂರು ಹೆಸರುಗಳ ಪ್ಯಾನೆಲ್ ಸಲ್ಲಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಪಕ್ಷದ ಪ್ರಮುಖರೊಬ್ಬರು ಹೇಳಿದ್ದಾರೆ.
ಚುನಾವಣಾ ವೇಳಾಪಟ್ಟಿಯ ಕುರಿತು ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಅವರು ನೀಡಿರುವ ಸೂಚನೆಯಂತೆ, ಜಿಬಿಎ ಚುನಾವಣೆಗಳು ಜೂನ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಪಕ್ಷಗಳು ಈಗಿನಿಂದಲೇ ಅಭ್ಯರ್ಥಿ ಪಟ್ಟಿ ಹಾಗೂ ಪ್ರಚಾರ ಕಾರ್ಯಕ್ಕೆ ವೇಗ ನೀಡಿವೆ.
ಜೂ.20 ರಿಂದ 24ರೊಳಗೆ ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳಿಗೆ ಚುನಾವಣೆ
ಗ್ರೇಟರ್ ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಂಗಡಣೆ ಮಾಡಲಾಗಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಪಶ್ಚಿಮ ಎಂದು ನಾಮಕರಣ ಮಾಡಲಾಗಿದೆ.
ಬಿಬಿಎಂಪಿಯನ್ನು ವಿಸ್ತರಿಸಿ ಜಿಬಿಎ ಮಾಡಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಆಡಳಿತಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಪಾಲಿಕೆ ವಿಭಜನೆ ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.
ಬೆಂಗಳೂರಿನ ಶಾಸಕರಿಗೆ ಸವಾಲು :
2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. 135 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು. ಆದರೆ ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳ ಪೈಕಿ 11 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಐದು ಪಾಲಿಕೆಗಳ ಪೈಕಿ ಎಷ್ಟು ಪಾಲಿಕೆಗಳಲ್ಲಿ ಕಾಂಗ್ರೆಸ್ ಅರಳಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ.
2015 ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದ ಬಳಿಕ ಬೆಂಗಳೂರು ಪಾಲಿಕೆಗೆ ಚುನಾವಣೆ ಆಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದವು. ಆದರೆ ಇದೀಗ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಗಿದೆ. ಆದರೆ ಬೆಂಗಳೂರಿನಲ್ಲಿ ಆಡಳಿತ ಪಕ್ಷದ ಪರವಾದ ವಾತಾವರಣ ಇಲ್ಲ ಎಂಬುದು ವಾಸ್ತವ.
ಜೂನ್ 30 ರೊಳಗಾಗಿ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಆದೇಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
