ಬೆಂಗಳೂರು, ಮೇ 11- ಜೆಡಿಎಸ್ ಪಕ್ಷದ ಬೆಳ್ಳಿಹಬ್ಬ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರ ಹುಟ್ಟುಹಬ್ಬದ ಅಂಗವಾಗಿ ಹಮಿಕೊಂಡಿರುವ ರಾಜ್ಯಮಟ್ಟದ ಜನತಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಟ್ರೋಫಿ ಹಾಗೂ ವಿವಿಧ ತಂಡಗಳ ಲೋಗೋವನ್ನು ಬಿಡುಗಡೆ ಮಾಡಲಾಯಿತು.
ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ವಿಧಾನಪರಿಷತ್ ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶ್‌ಗೌಡ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ಎಚ್.ಎಸ್. ಮೊದಲಾದವರು ಟ್ರೋಫಿ ಮತ್ತು ಲೋಗೊವನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಪಕ್ಷದ ಕೋರ್‌ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿಯವರು ಮೇ 15 ರಿಂದ 17 ರವರೆಗೆ ಮಾದಾವರ ಬಳಿಯ ನೈಸ್ ಗ್ರೌಂಡ್‌ನಲ್ಲಿ ರಾಜ್ಯಮಟ್ಟದ ಜೆಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ಪಂದ್ಯಾವಳಿಗಳು ನಡೆಯುತ್ತವೆ. ಬೆಂಗಳೂರು ಸೇರಿದಂತೆ 20 ಜಿಲ್ಲೆಗಳಿಂದ 24 ತಂಡಗಳು ಭಾಗವಹಿಸಲಿವೆ. ಮೇ 15 ರಂದು ಸಂಜೆ 5 ಗಂಟೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಮೇ 15 ರಂದು ಎಚ್.ಡಿ.ದೇವೇಗೌಡರು ಕೆಲಕಾಲ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಣೆ ಮಾಡಲಿದ್ದಾರೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ವಸತಿ, ಊಟ, ತಂಪು ಪಾನೀಯ ನೀಡಲಿದ್ದು, ಈಗಾಗಲೇ ಮೈದಾನದಲ್ಲಿ ಸಿದ್ಧತೆಗಳು ಶುರುವಾಗಿವೆ ಎಂದರು.
ಶರವಣ ಮಾತನಾಡಿ, ಜೆಡಿಎಸ್ ಬೆಳ್ಳಿಹಬ್ಬವಾಗಿರುವುದರಿಂದ ಇನ್ನೊಂದು ತಂಡ ಸೇರಿಸಿ 25 ತಂಡಗಳ ಪಂದ್ಯಾವಳಿ ಆಯೋಜಿಸಬೇಕು. ಈ ಪಂದ್ಯಾವಳಿ ವಿಜೇತ ತಂಡಕ್ಕೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು. ಎಲ್ಲಾ ಆಟಗಾರರಿಗೆ ಸರಣಿಕೆ ನೀಡಲಾಗುವುದು. ಕ್ರೀಡೆಗೆ ಉತ್ತೇಜನ ನೀಡಲು ಈ ಪಂದ್ಯಾವಳಿ ಆಯೋಜಿಸಲಾಗಿದೆ. ದೇವೇಗೌಡರ ಹುಟ್ಟುಹಬ್ಬದ ದಿನವಾದ ಮೇ 18 ರಂದು ಒಂದು ರೂಪಾಯಿಗೆ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಮುದ್ದೆ ಊಟ ನೀಡುವುದಾಗಿ ಪ್ರಕಟಿಸಿದರು.
ರಮೇಶ್‌ಗೌಡ ಮಾತನಾಡಿ, 2 ತಿಂಗಳಿನಿಂದ ಈ ಪಂದ್ಯಾವಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯುವಕರಿಗೆ ಉತ್ತೇಜನ ನೀಡಲು ಪಂದ್ಯಾವಳಿ ಹಮಿಕೊಳ್ಳಲಾಗುತ್ತಿದೆ ಎಂದರು.
ತಿಪ್ಪೇಸ್ವಾಮಿಯವರು ಮಾತನಾಡಿ, ಈ ಪಂದ್ಯಾವಳಿಗೆ ತುಮಕೂರಿನ ಜೀನಿ ಸಂಸ್ಥೆ ಸಹಕಾರ ನೀಡಿದ್ದು, ಮ್ಯಾನ್ ಆಫ್ ದ ಮ್ಯಾಚ್ ಪಡೆಯುವ ಆಟಗಾರರಿಗೆ ಜೀನಿ ಸಂಸ್ಥೆಯಿಂದ ಕಿಟ್ ನೀಡಲಾಗುವುದು. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕ್ರೀಡಾಪಟುಗಳಿಗೆ ಹಾಲು, ಮಜ್ಜಿಗೆ ನೀಡುವ ಭರವಸೆ ನೀಡಿದ್ದಾರೆ ಎಂದರು.
ಚಂದನ್ ಮಾತನಾಡಿ, ಪಂದ್ಯಾವಳಿಯ 2, 3 ಮತ್ತು 4ನೇ ಬಹುಮಾನವನ್ನು ಶಾಸಕ ಸಮೃದ್ಧಿ ಮಂಜುನಾಥ್‌ರವರು ಪಕ್ಷದ ವತಿಯಿಂದ ನೀಡಲಿದ್ದಾರೆ. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೂ ಸರಣಿಕೆ ನೀಡಲಾಗುವುದು. ಪಕ್ಷದ ಎಲ್ಲಾ ಶಾಸಕರು, ಜಿಲ್ಲಾಧ್ಯಕ್ಷರು ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತೇಜನ ನೀಡಲಿದ್ದಾರೆ. 5 ಸಾವಿರ ವೀಕ್ಷಕರು ಕೂರಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
