Thursday, May 14, 2026
Homeರಾಷ್ಟ್ರೀಯವಿಜಯ್‌ಗೆ ಬೆಂಬಲ ವಿಚಾರ : ಇಬ್ಬಾಗವಾದ ಎಐಎಡಿಎಂಕೆ

ವಿಜಯ್‌ಗೆ ಬೆಂಬಲ ವಿಚಾರ : ಇಬ್ಬಾಗವಾದ ಎಐಎಡಿಎಂಕೆ

AIADMK's CV Shanmugam Faction Announces Support To TVK

ಚೆನ್ನೈ,ಮೇ 12- ಹಿರಿಯ ಶಾಸಕರಾದ ಎಸ್‌‍.ಪಿ.ವೇಲುಮಣಿ ಮತ್ತು ಸಿ.ವಿ.ಷಣುಗಂ ನೇತೃತ್ವದ ಎಐಎಡಿಎಂಕೆ ಬಣ ಇಂದು ಮುಖ್ಯಮಂತ್ರಿ ಸಿ ಜೋಸೆಫ್‌ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರವನ್ನು ಬೆಂಬಲಿಸಲು ನಿರ್ಧರಿಸಿದೆ.

ಕಳೆದ ಕೆಲವು ದಿನಗಳಿಂದ ಎಐಎಡಿಎಂಕೆ 2 ಬಣಗಳಾಗಿ ವಿಭಜನೆಯಾಗಿದೆ ಎಂಬ ವದಂತಿ ಇತ್ತು. ಅಂದರೆ, 30 ಶಾಸಕರು ಸಿ.ವಿ.ಷಣುಗಂ ನೇತೃತ್ವದ ಬಣದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಉಳಿದ ಶಾಸಕರು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರೊಂದಿಗೆ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆಯ ಸಂಖ್ಯಾಬಲ ಇನ್ನಷ್ಟು ಬಲವಾಗಿದೆ. ಬಹುಮತ ಪರೀಕ್ಷೆಗೆ ಮುನ್ನವೇ ವಿಜಯ್‌ ಸರ್ಕಾರಕ್ಕೆ ಇದು ದೊಡ್ಡ ರಾಜಕೀಯ ಬಲವಾಗಿದ್ದು, ಅವರ ಸರ್ಕಾರ ಇನ್ನಷ್ಟು ಸ್ಥಿರವಾಗುವ ಲಕ್ಷಣಗಳು ಕಾಣಿಸುತ್ತಿವೆ.ರಾಜ್ಯದ ಪ್ರಮುಖ ಪಕ್ಷವಾಗಿದ್ದ ಎಐಎಡಿಎಂಕೆ ಈಗ ಎರಡು ಬಣಗಳಾಗಿ ವಿಭಜನೆಯಾಗಿದೆ.

ಈ ವಿಭಜನೆಯಿಂದ ನಟ ದಳಪತಿ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ದೊಡ್ಡ ಲಾಭವಾಗಿದೆ. ದಳಪತಿ ವಿಜಯ್‌ ಸರ್ಕಾರ ಇನ್ನಷ್ಟು ಬಲಿಷ್ಠವಾಗಿದೆ. ಹೌದು, ಟಿವಿಕೆ ಪಕ್ಷ ಈಗಾಗಲೇ ಸರ್ಕಾರ ರಚಿಸಿದರೂ, ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆಗೆ ಸ್ವಲ್ಪ ಕೊರತೆ ಇತ್ತು. ಶಾಸಕರ ಬೆಂಬಲದ ಕೊರತೆಯನ್ನು ತುಂಬಿಕೊಳ್ಳಲು ವಿಜಯ್‌ ಹಂಬಲಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಅವರ ಪರವಾಗಿದೆ.

24 ಶಾಸಕರ ಸಿ.ವಿ.ಷಣುಗಂ ಬಣ ಟಿವಿಕೆಗೆ ಬೆಂಬಲ :
ಎಐಎಡಿಎಂಕೆಯ ಮತ್ತೊಂದು ಪ್ರಮುಖ ನಾಯಕ ಇ.ಪಿಎಸ್‌‍ (ಎಡಪ್ಪಾಡಿ ಪಳನಿಸ್ವಾಮಿ) ಅವರ ಬಳಿಯಲ್ಲಿ ಈಗ 22 ಶಾಸಕರ ಬೆಂಬಲವಿದೆ. ಆದರೆ ಸಿ.ವಿ.ಷಣುಗಂ ನೇತೃತ್ವದ ಬಂಡಾಯ ಬಣದ ಜೊತೆ 24 ಶಾಸಕರು ಇದ್ದಾರೆ. ಅಂದರೆ, ಷಣುಗಂ ಬಣದ ಶಾಸಕರ ಸಂಖ್ಯೆ ಇ.ಪಿಎಸ್‌‍ ಬಣಕ್ಕಿಂತ ಹೆಚ್ಚು. ಇಂತಹ ಸಮಯದಲ್ಲಿ ಈ 24 ಶಾಸಕರು ಟಿವಿಕೆಗೆ ಬೆಂಬಲ ಘೋಷಿಸಿರುವುದು ತಮಿಳುನಾಡಿನ ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆಯಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಷಣುಗಂ, ಸಿಎಂ ವಿಜಯ್‌ ಅವರನ್ನು ಭೇಟಿ ಮಾಡಿ ಅವರ ಸರ್ಕಾರವನ್ನು ಬೆಂಬಲಿಸುವ ಪತ್ರವನ್ನು ನೀಡುವುದಾಗಿ ಹೇಳಿದರು.ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಡಿಎಂಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬಯಸಿದ್ದರು ಎಂದು ಅವರು ಆರೋಪಿಸಿದರು.

ಡಿಎಂಕೆಯನ್ನು ಸೋಲಿಸಲು ಮಾತ್ರ ಎಐಎಡಿಎಂಕೆ ರಚನೆಯಾದ ಕಾರಣ ಅವರ (ಪಳನಿಸ್ವಾಮಿ) ನಿರ್ಧಾರವನ್ನು ನಾವು ವಿರೋಧಿಸಿದ್ದೇವೆ. ಪಳನಿಸ್ವಾಮಿ ತಕ್ಷಣವೇ ಪಕ್ಷದ ಸಾಮಾನ್ಯ ಮಂಡಳಿ ಸಭೆಯನ್ನು ಕರೆಯಬೇಕೆಂದು ಷಣುಗಂ ಒತ್ತಾಯಿಸಿದರು.

ನಾವು ಡಿಎಂಕೆಯೊಂದಿಗೆ ಕೈಜೋಡಿಸಿದ್ದರೆ, ಎಐಎಡಿಎಂಕೆ ಪಕ್ಷವೇ ಅಸ್ತಿತ್ವ ಕಳೆದುಕೊಳ್ಳುತ್ತಿತ್ತು. ಹಾಗಾಗಿ ಪಕ್ಷದ ಮೂಲ ಸಿದ್ಧಾಂತಗಳನ್ನು ಉಳಿಸಿಕೊಳ್ಳಲು, ಡಿಎಂಕೆಗೆ ಬೆಂಬಲ ಕೊಡುವುದನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸಿದ್ದೇವೆ. ಪ್ರಸ್ತುತ ನಾವು ಯಾವುದೇ ಮೈತ್ರಿಯಲ್ಲಿಲ್ಲ, ಆದರೆ ಡಿಎಂಕೆ ವಿರುದ್ಧ ಟಿವಿಕೆಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಡಿಎಂಕೆ ವಿರುದ್ಧ ಸಿ.ವಿ.ಷಣುಗಂ ತೀವ್ರ ಟೀಕೆಗಳನ್ನು ಮಾಡಿದರು. ಡಿಎಂಕೆಗೆ ಬೆಂಬಲ ನೀಡುವುದು ಎಐಎಡಿಎಂಕೆಯ ತತ್ವದ್ರೋಹವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ತಮಿಳುನಾಡಿನಲ್ಲಿ ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಎಐಎಡಿಎಂಕೆಯ ರಾಜಕೀಯ ಗುರಿ ಎಂದು ಹೇಳಿದರು.

ಇದೇ ಸಮಯದಲ್ಲಿ, ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಒಳಗಿನಿಂದಲೂ ಬದಲಾವಣೆ ಕಂಡುಬಂದಿದೆ. ಶಾಸಕಾಂಗ ಪಕ್ಷದ ಬಹುಪಾಲು ಸದಸ್ಯರು ಎಸ್‌‍.ಪಿ. ವೇಲುಮಣಿ ಅವರನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಎಐಎಡಿಎಂಕೆಯೊಳಗಿನ ನೇತೃತ್ವದ ಹೋರಾಟ ಮತ್ತಷ್ಟು ಗಾಢವಾಗಿರುವುದನ್ನು ತೋರಿಸುತ್ತದೆ.

ಎಐಎಡಿಎಂಕೆಯ ಒಡಕು, ಸಿ.ವಿ. ಷಣುಗಂ ಬಣದ 24 ಶಾಸಕರ ಟಿವಿಕೆಗೆ ಬೆಂಬಲ, ಮತ್ತು ಡಿಎಂಕೆ ವಿರುದ್ಧ ಒಂದಾಗಿರುವ ನಿಲುವು ಇವೆಲ್ಲವುಗಳು ತಮಿಳುನಾಡಿನ ರಾಜಕೀಯ ಚಿತ್ರಣವನ್ನು ಹೊಸ ದಿಕ್ಕಿಗೆ ಕೊಂಡೊಯ್ದಿವೆ. ದಳಪತಿ ವಿಜಯ್‌ ಅವರ ಟಿವಿಕೆ ಈಗ ರಾಜ್ಯ ರಾಜಕೀಯದಲ್ಲಿ ನಿರ್ಲಕ್ಷ್ಯ ಮಾಡಲಾಗದ ಪ್ರಮುಖ ಶಕ್ತಿಯಾಗಿ ಹೊರಹೊಮಿದೆ.

ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ 47 ಸ್ಥಾನಗಳನ್ನು ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಕಾರಣದಿಂದಾಗಿ ಅನೇಕ ಶಾಸಕರು ಹಾಗೂ ಕಾರ್ಯಕರ್ತರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರ ಬಗ್ಗೆ ಅತೃಪ್ತರಾಗಿದ್ದಾರೆಂದು ಹೇಳಲಾಗುತ್ತಿದೆ.

ಶಾಸಕಾಂಗ ಸಮಿತಿ ನಾಯಕನ ಸ್ಥಾನಕ್ಕೆ ಪಳನಿಸ್ವಾಮಿ ಅವರಿಗೆ ಎಐಎಡಿಎಂಕೆಯ ಕೇವಲ 17 ಶಾಸಕರು ಬೆಂಬಲ ಸೂಚಿಸಿದ್ದಾರೆ.ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್‌‍) ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪಕ್ಷದ 30 ಶಾಸಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಇಂದು ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾಗುತ್ತಿದ್ದಂತೆ ಎಐಎಡಿಎಂಕೆ ಶಾಸಕರು 2 ಗುಂಪುಗಳಾಗಿ ವಿಂಗಡಿಸಲ್ಪಟ್ಟು ವಿಧಾನಸಭೆಯೊಳಗೆ ಕುಳಿತಿದ್ದರು.

RELATED ARTICLES

Latest News