Thursday, May 14, 2026
Homeರಾಜ್ಯಇಂಧನ ಮಾರಾಟಕ್ಕೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಇಂಧನ ಮಾರಾಟಕ್ಕೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

State government issues new guidelines for fuel sales

ಬೆಂಗಳೂರು, ಮೇ 12- ಪೆಟ್ರೋಲ್‌ ಹಾಗೂ ಡೀಸೆಲ್‌ ಲಭ್ಯತೆ ಕುರಿತು ಆತಂಕಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಇಂಧನ ಮಾರಾಟಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊರಡಿಸಿರುವ ಆದೇಶ ಇದೀಗ ಸಾರ್ವಜನಿಕರು ಹಾಗೂ
ಪೆಟ್ರೋಲ್‌ ಬಂಕ್‌ ಮಾಲೀಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಪೆಟ್ರೋಲಿಯಂ ನಿಯಮ-2022 ಅನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿರುವ ಸರ್ಕಾರ, ರಾಜ್ಯದ ಎಲ್ಲಾ ಚಿಲ್ಲರೆ ಇಂಧನ ಮಾರಾಟ ಕೇಂದ್ರಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ವಿಶೇಷವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ನಿಗದಿತ ಪ್ರಮಾಣ ಹಾಗೂ ನಿಯಮಗಳಂತೆ ಮಾತ್ರ ಮಾರಾಟ ಮಾಡಬೇಕು ಎಂದು ಕಟ್ಟಪ್ಪಣೆ ವಿಧಿಸಲಾಗಿದೆ.

ಜಾಗತಿಕ ಸನ್ನಿವೇಶ, ಇಂಧನ ಸರಬರಾಜಿನ ಅನಿಶ್ಚಿತತೆ ಹಾಗೂ ಕೃತಕ ಅಭಾವ ಸೃಷ್ಟಿಸುವ ಸಾಧ್ಯತೆಗಳ ಹಿನ್ನೆಲೆ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ ಎನ್ನಲಾಗಿದೆ. ಸಾರ್ವಜನಿಕರಿಗೆ ಇಂಧನ ಕೊರತೆ ಉಂಟಾಗದಂತೆ ಹಾಗೂ ಅನಧಿಕೃತ ದಾಸ್ತಾನು, ದುರುಪಯೋಗ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ನಿಯಮಗಳ ಪ್ರಕಾರ ವಾಹನಗಳ ಕಂಟೇನರ್‌ಗಳಿಗೆ ಗರಿಷ್ಠ 200 ಲೀಟರ್‌ ಮಿತಿ ನಿಗದಿ ಮಾಡಲಾಗಿದೆ. ಪೆಟ್ರೋಲ್‌ ಅಥವಾ ಡೀಸೆಲ್‌ ಅನ್ನು ಬಾಟಲಿ, ಕ್ಯಾನ್‌ ಸೇರಿದಂತೆ ಅನಧಿಕೃತ ಪಾತ್ರೆಗಳಲ್ಲಿ ನೀಡಬಾರದು ಎಂದು ಸೂಚಿಸಲಾಗಿದೆ. ಇಂಧನವನ್ನು ವಾಹನಗಳ ಟ್ಯಾಂಕ್‌ಗಳಿಗೆ ಮಾತ್ರ ತುಂಬಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಸಗಟು ವ್ಯಾಪಾರ ನಡೆಸುವಂತಿಲ್ಲ. ಸಗಟು ಮಾರಾಟವನ್ನು ಸರ್ಕಾರ ನಿಗದಿಪಡಿಸಿರುವ ಸ್ಥಳಗಳಲ್ಲಿ ಮಾತ್ರ ಮಾಡಲು ಅವಕಾಶ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಡೀಸೆಲ್‌ ಪೂರೈಕೆ ಖಚಿತಪಡಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಅಧಿಕಾರಿಗಳು ಕಾಲಕಾಲಕ್ಕೆ ಬಂಕ್‌ಗಳಲ್ಲಿ ಪರಿಶೀಲನೆ ನಡೆಸಬೇಕು ಹಾಗೂ ಜಿಲ್ಲಾಧಿಕಾರಿಗಳು ಸಂಪೂರ್ಣ ಪ್ರಕ್ರಿಯೆಯನ್ನು ಮಾನಿಟರ್‌ ಮಾಡಬೇಕು ಎಂದು ಸೂಚಿಸಲಾಗಿದೆ.

ಸರ್ಕಾರದ ಈ ಕ್ರಮ ಇಂಧನ ಕೊರತೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವೇ ಅಥವಾ ಮುಂದಿನ ದಿನಗಳಲ್ಲಿ ಪೂರೈಕೆ ಕಷ್ಟಕರವಾಗಬಹುದು ಎಂಬುದರ ಮುನ್ಸೂಚನೆಯೇ ಎಂದು ತಿಳಿದುಬಂದಿಲ್ಲ.

RELATED ARTICLES

Latest News