Homeರಾಜ್ಯಮೇ.20ರಿಂದ ಅನಿರ್ಧಿಷ್ಟಾವಧಿ ಸಾರಿಗೆ ಮುಷ್ಕರ

ಮೇ.20ರಿಂದ ಅನಿರ್ಧಿಷ್ಟಾವಧಿ ಸಾರಿಗೆ ಮುಷ್ಕರ

Indefinite transport strike from May 20

ಬೆಂಗಳೂರು, ಮೇ 13- ರಾಜ್ಯ ಸರ್ಕಾರ ವೇತನ ಪರಿಷ್ಕರಣೆಯ ಆದೇಶಕ್ಕೆ ಜಗ್ಗದ ಸಾರಿಗೆ ನೌಕರರು ಮೇ.20ರಿಂದ ಕೆಲಸ ಸ್ಥಗಿತಗೊಳಿಸಿ, ಅನಿರ್ಧಿಷ್ಟಾವಧಿ ಸಾರಿಗೆ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ನಡೆದ ನಿರಂತರ ಮಾತುಕತೆಗಳ ಫಲಿತಾಂಶದ ಭಾಗವಾಗಿ ನಿನ್ನೆ ಸಂಜೆ ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಶೇ.12.5ರಷ್ಟು ವೇತನವನ್ನು ಪರಿಷ್ಕರಣೆ ಮಾಡಿ, ಆದೇಶ ಹೊರಡಿಸಿದೆ. 2025ರ ಮಾರ್ಚ್‌ 31ರಿಂದ ಇದು ಪೂರ್ವಾನುವಯಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.

ಆದರೆ ಶೇ. 25ರಷ್ಟು ವೇತನ ಪರಿಷ್ಕರಣೆಯಾಗಬೇಕು ಎಂಬುದೂ ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳನ್ನು ಮಂಡಿಸಿರುವ ಸಾರಿಗೆ ನಿಗಮಗಳ ಜಂಟಿಕ್ರಿಯಾ ಸಮಿತಿ ಸರ್ಕಾರದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

2024ರ ಜನವರಿ ಒಂದರಿಂದ 4 ವರ್ಷಗಳ ಅವಧಿಗೆ ಮೂಲ ವೇತನದೊಂದಿಗೆ ಶೇ.25ರಷ್ಟು ಹೆಚ್ಚಳ ಮಾಡಬೇಕು ಎಂಬುದು ಸಾರಿಗೆ ಸಂಸ್ಥೆಗಳ ಜಂಟಿಕ್ರಿಯಾ ಸಮಿತಿಯ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಯಾವುದೇ ಚರ್ಚೆ ನಡೆಸದೇ ಏಕಪಕ್ಷೀಯವಾಗಿ 2025ರ ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ಶೇ. 12.5ರಷ್ಟು ವೇತನವನ್ನು ಪರಿಷ್ಕರಣೆ ಮಾಡಲಾಗಿದೆ. ಇದು ಸಮತವಲ್ಲ ಎಂದು ನೌಕರರ ಜಂಟಿಕ್ರಿಯಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಸುದ್ದಿಗಾರರೊಂದಿಗೆ ಮಾತನಡಿರುವ ಕೆಎಸ್‌‍ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ (ಎಐಟಿಯುಸಿ) ಅಧ್ಯಕ್ಷೆ ಜ್ಯೋತಿ ಅನಂತ ಸುಬ್ಬರಾವ್‌, ಸರ್ಕಾರ ಕಾರ್ಮಿಕರಿಗೆ ಕೊಡಬೇಕಾದ ಸೌಲಭ್ಯಗಳನ್ನು ಕೊಡದೇ ಮೇ 20 ರಂದು ತುಮಕೂರಿನಲ್ಲಿ ಸಾಧನ ಸಮಾವೇಶ ಮಾಡಲು ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೋವಿಡ್‌ ಸಮಯದಲ್ಲೇ ಶೇ.15ರಷ್ಟ ವೇತನ ಹೆಚ್ಚಳವಾಗಿತ್ತು. ಪ್ರತಿ ನಾಲ್ಕು ವರ್ಷಗಳಿಗೊಮೆ ವೇತನ ಹೆಚ್ಚಿಸಬೇಕು ಎಂಬ ನಿಯಮವನ್ನು ಸರ್ಕಾರ ಉಲ್ಲಂಘನೆ ಮಾಡುತ್ತಿದೆ. ಶೇ. 12ರಷ್ಟು ವೇತನ ಹೆಚ್ಚಳ ಪ್ರಸ್ತುತ ದಿನಮಾನಗಳಲ್ಲಿನ ಕಾರ್ಮಿಕರ ಜೀವನ ನಿರ್ವಹಣೆಗೆ ಸಾಲುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ಎರಡೂವರೆ ವರ್ಷದಿಂದಲೂ ನಾವು ಸರ್ಕಾರದ ಜೊತೆ ನಿರಂತರ ಮಾತುಕತೆ ನಡೆಸಿದ್ದೇವೆ. ಸಾರಿಗೆ ಕ್ಷೇತ್ರ ಸಾರ್ವಜನಿಕರಿಗೆ ಅಗತ್ಯ ಸೇವೆಯಾಗಿರುವುದರಿಂದ ಸಂಘರ್ಷ ಬೇಡ ಎಂಬ ಕಾರಣಕ್ಕೆ ಚರ್ಚೆಯ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಪ್ರಯತ್ನ ಮಾಡಿದ್ದೆವು. ಆದರೆ ನಮ ಹಲವು ಬೇಡಿಕೆಗಳನ್ನು ಕಡೆಗಣಿಸಿ ನಿನ್ನೆ ಏಕಾಏಕಿ ಆದೇಶ ಹೊರಡಿಸಲಾಗಿದೆ, ಇದು ಸರಿಯಲ್ಲ ಎಂದರು.

ಸಾರಿಗೆ ನೌಕರರ ಜಂಟಿಕ್ರಿಯಾ ಸಮಿತಿ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮೇ 20ರಿಂದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗಳು, ಕಾರ್ಮಿಕರು ಮತ್ತು ಕಾರ್ಯಾಗಾರಗಳಲ್ಲಿನ ಸಿಬ್ಬಂದಿಗಳೂ ಕೂಡ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ಕಾರ ತಮ ಬೇಡಿಕೆಗಳನ್ನು ಈಡೇರಿಸುವ ಬದಲಾಗಿ ಎಸಾ ಕಾಯ್ದೆ ಜಾರಿಯಂತಹ ಬಲವಂತದ ಕ್ರಮಗಳಿಗೆ ಮುಂದಾದರೆ ಅಥವಾ ದೋಷಾರೋಪಣಾ ಪಟ್ಟಿ ಸಲ್ಲಿಕೆಯಂತಹ ಪ್ರಯತ್ನಗಳನ್ನು ನಡೆಸಿದರೆ, ಸಾರಿಗೆ ನೌಕರರು ಜಗ್ಗುವುದಿಲ್ಲ. ಬೇರೆಯೇ ರೀತಿಯ ಪರಿಣಾಮವನ್ನು ಸರ್ಕಾರ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೇಡಿಕೆಗಳು:
2026ರ ಫೆಬ್ರವರಿ 18ರ ಹಾಗೂ ನಿನ್ನೆ ಹೊರಡಿಸಲಾದ ಏಕಪಕ್ಷೀಯ ಆದೇಶಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡಬೇಕು. 2023ರ ಡಿಸೆಂಬರ್‌ 31ರಲ್ಲಿ ಚಾಲ್ತಿಯಲ್ಲಿದ್ದ ಮೂಲ ವೇತನದ ಶೇ. 25ರಷ್ಟು ಹೆಚ್ಚಿಸಿ, 2024ರ ಜನವರಿ ಒಂದರಿಂದ ನಾಲ್ಕು ವರ್ಷಗಳ ಅವಧಿಗೆ ಜಾರಿಗೊಳಿಸಬೇಕು.

2022ರ ಜುಲೈ 1ರಲ್ಲಿದ್ದ ಶೇ.31 ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ವಾರ್ಷಿಕ ಬಡ್ತಿಯನ್ನು 2024ರ ಜನವರಿ 25ರ ಬೇಡಿಕೆ ಪಟ್ಟಿಯಲ್ಲಿರುವಂತೆ ಹೆಚ್ಚಿಸಿ, ವೇತನಶ್ರೇಣಿ ಹೆಚ್ಚಿಸಬೇಕು, ಸದರಿ ಅವಧಿಯ ಬಾಕಿ ಹಣವನ್ನು ಪಾವತಿಸಬೇಕು, ಬಾಟಾ ಮತ್ತಿತರರ ಭತ್ಯೆಗಳನ್ನು ಹೆಚ್ಚಿಸಬೇಕು.

2020ರ ಜನವರಿ ಒಂದರಿಂದ ಡಿಸೆಂಬರ್‌ 31ರ ಒಳಗಿನ 12 ತಿಂಗಳ ಬಾಕಿ ಹಣವನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರಿಗೆ ಪಾವತಿಸಬೇಕು. 26 ತಿಂಗಳ ಬಾಕಿ 1,272 ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಪಾವತಿಸಬೇಕೆಂದು ಆಗ್ರಹಿಸಲಾಗಿದೆ. ಫಾರಂ-4 ಮತ್ತಿತರ ಬೇಡಿಕೆಗಳನ್ನು ಜಂಟಿಕ್ರಿಯಾ ಸಂಸ್ಥೆ ಜೊತೆ ಚರ್ಚಿಸಿ ಒಂದು ತಿಂಗಳ ಕಾಲಮಿತಿಯಲ್ಲಿ ಬಗೆಹರಿಸುವಂತೆ ಒತ್ತಾಯಿಸಲಾಗಿದೆ.

RELATED ARTICLES

Latest News