Thursday, April 16, 2026
Homeಜಿಲ್ಲಾ ಸುದ್ದಿಗಳುರಂಪಾಟ ಮಾಡಿ ಪರಾರಿಯಾದ ಸೆರೆ ಸಿಕ್ಕಿದ್ದ ಕಾಡಾನೆ

ರಂಪಾಟ ಮಾಡಿ ಪರಾರಿಯಾದ ಸೆರೆ ಸಿಕ್ಕಿದ್ದ ಕಾಡಾನೆ

Wild elephant

ಬೇಲೂರು,ಏ.16- ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಸಾಕಾನೆಗಳ ನೆರವಿನೊಂದಿಗೆ ಸೆರೆ ಹಿಡಿದು ಕರೆತರುವಾಗ ರಂಪಾಟ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲೂಕಿನ ಅರೇಹಳ್ಳಿ ಹೋಬಳಿಯ ಕಣಗುಪ್ಪೆ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 65 ವರ್ಷದ ರಾಜಶೆಟ್ಟಿ ಎಂಬುವವರನ್ನು ಕಾಡಾನೆ ದಂತದಿಂದ ತಿವಿದು, ತುಳಿದು ಸಾಯಿಸಿತ್ತು. ಈ ವಿಚಾರವಾಗಿ ಗ್ರಾಮಸ್ಥರು, ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಪ್ರತಿಭಟಿಸಿ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದ್ದರು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕುಮ್ಕಿ ಸಾಕಾನೆಗಳಾದ ಅಯ್ಯಪ್ಪ, ಶ್ರೀರಾಮ, ಲಕ್ಷ್ಮಣ, ಸುಗ್ರೀವ, ಧನಂಜಯ, ಹರ್ಷ ಸೇರಿದಂತೆ 6 ಸಾಕಾನೆಗಳ ಮೂಲಕ ನಿನ್ನೆ ಬೆಳಗ್ಗೆ ಕಾಡಾನೆ ಪತ್ತೆ ಹಚ್ಚಿ ಸೆರೆ ಹಿಡಿಯಲು ಅರೇಹಳ್ಳಿ ಹೋಬಳಿಯ ಕಿತ್ತಾವರ ಮೀಪದ ಕಾಫಿ ತೋಟದಲ್ಲಿ ಕಾರ್ಯಚರಣೆಗಿಳಿದು ಮದ್ಯಾಹ್ನ ಸಾಕಾನೆಗಳೊಂದಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದು ಕಾಡಾನೆಗೆ ದಪ್ಪಗಿದ್ದ ಹಗ್ಗಗಳಿಂದ ಕಟ್ಟಿದ್ದಲ್ಲದೆ, ಕಾಡಾನೆ ಒದ್ದಾಡದಂತೆ ಮರಕ್ಕೆ ಕಟ್ಟಲಾಗಿತ್ತು.

ಜತೆಗೆ ಕಾಡಾನೆ ಏಳಿಸಲು ಮತ್ತೆ ರಿವರ್ಸ್‌ ಚುಚ್ಚು ಮದ್ದು ನೀಡಲಾಗಿತ್ತು. ಅಧಿಕಾರಿಗಳು ಇನ್ನೇನು ಕಾಡಾನೆ ಸೆರೆ ಕಾರ್ಯಚರಣೆ ಯಶಸ್ವಿಯಾಯಿತು ಎನ್ನುವಷ್ಟರಲ್ಲೆ ಸುಮಾರು 4 ಟನ್‌ನಷ್ಟು ದಷ್ಟಪುಷ್ಟವಾಗಿ ಬೃಹತ್‌ ಗಾತ್ರದಲ್ಲಿದ್ದ ಗಂಡು ಕಾಡಾನೆ ಆಕ್ರೋಶ ಭರಿತವಾಗಿ ಕಟ್ಟಿದ್ದ ಹಗ್ಗಗಳನ್ನೆಲ್ಲ ತುಂಡರಿಸಿ, ಹಗ್ಗ ಕಟ್ಟಿದ್ದ ಮರವನ್ನೂ ಬೀಳಿಸಿ ಸಾಕಾನೆಗಳನ್ನೂ ಬಿಡದೆ ಹೆದರಿಸಿದ್ದಲ್ಲದೆ, ಕಾರ್ಯಚರಣೆಗಿಳಿದಿದ್ದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನೂ ಬಿಡದೆ ಕೆಲ ಸಮಯಅಟ್ಟಾಡಿಸಿ ನಂತರ ತಪ್ಪಿಸಿಕೊಂಡು ತೋಟದೊಳಕ್ಕೆ ಹೋಗಿದೆ. ಆದರೆ ಕಾಡಾನೆಯ ರೌದ್ರಾವತಾರ ಕಣ್ಣಾರೆ ಹತ್ತಿರದಿಂದ ನೋಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೇಗಾದರೂ ಮಾಡಿ ಕಾಡಾನೆಯನ್ನು ಸೆರೆ ಹಿಡಿಯಲೇ ಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಪುನಃ ಸಂಜೆ ಕಾಡಾನೆ ಸೆರೆ ಕಾರ್ಯಚರಣೆಗೆ ಮುಂದಾದರೂ ಸಹ ತೋಟದೊಳಗಿನ ಮಬ್ಬು ಕತ್ತಲೆ ಕಾರ್ಯಚರಣೆಗೆ ಅಡ್ಡಿಯಾದ್ದರಿಂದ, ಕಾಡಾನೆ ಸೆರೆ ಕಾರ್ಯಚರಣೆಯನ್ನು ಇಂದೂ ಕೂಡ ಮುಂದುವರೆಸಿದರು.

ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕಾನೆಗಳೊಂದಿಗೆ ತಾಲೂಕಿನ ಬಿಕ್ಕೋಡು ಸಮೀಪದ ಆನೆ ಕ್ಯಾಂಪ್‌ಗೆ ವಾಪಸ್‌‍ ಬಂದಿಳಿದರು. ಕಾಡಾನೆ ಸೆರೆ ಕಾರ್ಯಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್‌ ಕುಮಾರ್‌, ಇಟಿಎಫ್‌ ವಿಭಾಗದ ಎಸಿಎಫ್‌ ಉಮಾಪತಿ, ವಲಯ ಅರಣ್ಯಧಿಕಾರಿ ಯತೀಶ್‌ ಸೇರಿದಂತೆ ಜಿಲ್ಲೆಯ ಎಲ್ಲ ವಲಯ ಅರಣ್ಯಾಧಿಕಾರಿಗಳು, ಇಟಿಎಫ್‌, ಆರ್‌ಆರ್‌ಟಿ ಸಿಬ್ಬಂದಿ, ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ಹಾಗೂ ಸಾಕಾನೆಗಳ ಮಾವುತರು, ಕಾವಾಡಿಗರು ಸೇರಿದಂತೆ ಒಟ್ಟಾರೆಯಾಗಿ 100 ಕ್ಕೂ ಹೆಚ್ಚು ಜನರು ಬಾಗವಹಿಸಿದ್ದರು.

RELATED ARTICLES

Latest News