ನವದೆಹಲಿ, ಮೇ 16- ದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತೀವ್ರಗೊಂಡಿರುವ ಸಂದರ್ಭದಲ್ಲೇ ಯುನೈಟೆಡ್ ಡಾಕ್ಟರ್ಸ್ ಫ್ರಂಟ್ ಸುಪ್ರೀಂ ಕೋರ್ಟ್ನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ಟಿಎ) ವಿಸರ್ಜನೆ ಕೋರಿ ಅರ್ಜಿ ಸಲ್ಲಿಸಿದೆ.
1860 ರ ಸೊಸೈಟೀಸ್ ನೋಂದಣಿ ಕಾಯ್ದೆಯಡಿಯಲ್ಲಿ ಸ್ಥಾಪಿಸಲಾದ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯನ್ನು ವಿಸರ್ಜಿಸಬೇಕೆಂದು ಮತ್ತು ಸಂಸತ್ತಿನ ಕಾಯ್ದೆಯ ಮೂಲಕ ಹೊಸ ಶಾಸನಬದ್ಧ ಚೌಕಟ್ಟನ್ನು ರಚಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಸ್ಪಷ್ಟ ಕಾನೂನು ಅಧಿಕಾರ, ಪಾರದರ್ಶಕತೆಯ ಮಾನದಂಡಗಳು ಮತ್ತು ಸಂಸತ್ತಿಗೆ ಹೊಣೆಗಾರಿಕೆಯನ್ನು ಹೊಂದಿರುವ ಶಾಸನಬದ್ಧ ರಾಷ್ಟ್ರೀಯ ಪರೀಕ್ಷಾ
ಸಂಸ್ಥೆಯನ್ನು ಸ್ಥಾಪಿಸಲು ಸಂಸತ್ತಿನಲ್ಲಿ ಶಾಸನವನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯು ಕೋರಿದೆ.
2026 ರ ನೀಟ್-ಯುಜಿ ಪರೀಕ್ಷೆಯನ್ನು ನಡೆಸುವಲ್ಲಿ ವ್ಯವಸ್ಥಿತ ಮತ್ತು ದುರಂತ ವೈಫಲ್ಯವನ್ನು ಆರೋಪಿಸಿ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ರಚನಾತಕ ಸುಧಾರಣೆಗಳನ್ನು ಕೋರಿ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ನೋಂದಾಯಿತ ಸಂಘಟನೆಯಾದ ಯುನೈಟೆಡ್ ಡಾಕ್ಟರ್ಸ್ ಫ್ರಂಟ್ (ಯುಡಿಎಫ್) ಅರ್ಜಿಯನ್ನು ಸಲ್ಲಿಸಿದೆ.
