ಬೆಂಗಳೂರು, ಅ.31- ಪೌರ ಕಾರ್ಮಿಕರ ಪಿಎಫ್ ಮತ್ತು ಇಎಸ್ಐ ಹಣ ಪಾವತಿಸದೆ ವಂಚಿಸಿರುವ ಗುತ್ತಿಗೆದಾರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಪತ್ರ ಬರೆದಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 165ರಲ್ಲಿ 2013-14ರಿಂದ 2017-18ರ ಅವಧಿಯಲ್ಲಿ ತ್ಯಾಜ್ಯ ವಿಲೇವಾರಿ ಗುತ್ತಿಗೆ ನಿರ್ವಹಿಸಿದ್ದ ವಿಕೆ ಎಂಟರ್ಪ್ರೈಸಸ್ನ ಮಾಲೀಕ ವಿಜಯ್ ಕುಮಾರ್ ಎಂಬಾತ ಗುತ್ತಿಗೆ ಪೌರ ಕಾರ್ಮಿಕರಿಗೆ ನಿಯಮಾನುಸಾರ ಪಾವತಿಸಬೇಕಿದ್ದ ಪಿಎಫ್ ಮತ್ತು ಇಎಸ್ಐ ಮೊತ್ತವನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಅವಧಿಯಲ್ಲಿ ಪಾಲಿಕೆಯಿಂದ 14.12 ಕೋಟಿ ರೂ. ಗುತ್ತಿಗೆ ಹಣವನ್ನು ವಿಜಯ್ ಕುಮಾರ್ ಪಡೆದಿದ್ದಾರೆ. ಆದರೆ, 134 ಪೌರ ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್ಐ ಸೌಲಭ್ಯ ದೊರೆಯದಿರುವ ಸಂಬಂಧ ಹಲವು ವರ್ಷಗಳಿಂದ ದೂರುಗಳು ಸಲ್ಲಿಕೆಯಾಗಿದ್ದರೂ, ಕಾರ್ಮಿಕರಿಗೆ ನ್ಯಾಯ ದೊರೆತಿಲ್ಲ ಎಂದು ಅವರು ದೂರಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ: ಗುತ್ತಿಗೆದಾರನ ವಂಚನೆ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು 2022ರ ಏಪ್ರಿಲ್ 28ರಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಯ್ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮೊದಲು, ಏಪ್ರಿಲ್ 4ರಂದು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು.
ನೋಟಿಸ್ಗೆ ಏಪ್ರಿಲ್ 13ರಂದು ಉತ್ತರಿಸಿದ್ದ ಗುತ್ತಿಗೆದಾರ, ಪೌರ ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್ಐ ಪಾವತಿಸಿರುವ ದಾಖಲೆಗಳನ್ನು ಮೂರು ತಿಂಗಳೊಳಗೆ ಸಲ್ಲಿಸುವುದಾಗಿ ಲಿಖಿತ ಭರವಸೆ ನೀಡಿದ್ದ. ಆದರೆ, ಈವರೆಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಹಾಗೂ ಕಾರ್ಮಿಕರಿಗೆ ಪಾವತಿಸಬೇಕಾದ ಹಣದ ಸಮಸ್ಯೆ ಬಗೆಹರಿದಿಲ್ಲ ಎಂದು ರಮೇಶ್ ಆರೋಪಿಸಿದ್ದಾರೆ.
ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರು ಹಾಗೂ ವೇತನ ಪಾವತಿ ಕಾಯ್ದೆ-1936ರ ಅಡಿಯಲ್ಲಿ ಅಧಿಕಾರ ಹೊಂದಿರುವ ಪ್ರಾಧಿಕಾರವು 2024ರ ಜೂನ್ 18ರಂದು ಗುತ್ತಿಗೆದಾರನಿಗೆ ಮತ್ತೊಂದು ನೋಟಿಸ್ ಜಾರಿಗೊಳಿಸಿತ್ತು. 30 ದಿನಗಳೊಳಗೆ 13,56,306 ಪಾವತಿಸುವಂತೆ ಸೂಚಿಸಲಾಗಿತ್ತು. ಆದರೂ, ಈವರೆಗೆ ಒಂದು ರೂಪಾಯಿಯನ್ನೂ ಪಾವತಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
134 ಪೌರ ಕಾರ್ಮಿಕರಿಗೆ ಸಂಬಂಧಿಸಿದ ಪಿಎಫ್ ಮತ್ತು ಇಎಸ್ಐ ಹಣ ಪಾವತಿ ವಿಚಾರದಲ್ಲಿ ಹಲವು ವರ್ಷಗಳಿಂದ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಗುತ್ತಿಗೆದಾರ ವಿಜಯ್ ಕುಮಾರ್ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ರಮೇಶ್ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
