ಬೆಂಗಳೂರು, ಫೆ. 3- ನಗರದಲ್ಲಿ ಅತಿ ಹೆಚ್ಚು ಅಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 7,000 ಆಸ್ತಿಗಳ ಹರಾಜಿಗೆ ಜಿಬಿಎ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿ ಸುಮಾರು 7,000 ಆಸ್ತಿ ಮಾಲೀಕರು ಒಟ್ಟು 437 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿಯನ್ನು ಉಳಿಸಿಕೊಂಡಿದ್ದು.ಈ ಸಂಬಂಧ ಆಸ್ತಿ ಮಾಲೀಕರಿಗೆ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆ.
ಆದರೂ ಸಹ ತೆರಿಗೆ ಪಾವತಿಸದೆ ಇರುವುದರಿಂದ, ಮುಂದಿನ ಕ್ರಮವಾಗಿ ಅಸ್ತಿ ಜಪ್ತಿ ಆದೇಶಗಳನ್ನು ಹೊರಡಿಸಲಾಗಿದೆ. ಜಪ್ತಿ ಆದೇಶಗಳ ಹೊರಡಿಸಿದ ಬಳಿಕವೂ ತೆರಿಗೆ ಪಾವತಿ ಆಗದಿರುವ ಹಿನ್ನೆಲೆಯಲ್ಲಿ ಆಸ್ತಿಗಳನ್ನು ಫೆ.17 ರಂದು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಹರಾಜು ಮಾರಾಟಕ್ಕೆ ನಿಗದಿಪಡಿಸಲಾಗಿದೆ.
ಹರಾಜಿಗೆ ಸಂಬಂಧಿಸಿದ ನೋಟಿಸ್‌ಗಳ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ. ಸಂಬಂಧಿತ ಆಸ್ತಿ ಮಾಲೀಕರು ತಕ್ಷಣವೇ ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಿದಲ್ಲಿ, ಹರಾಜು ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಬಹುದು ಅಂತ ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ್ ರಾವ್ ಅದೇಶ ಹೊರಡಿಸಿದ್ದಾರೆ.
ಸುಮಾರು7,000 ಆಸ್ತಿ ಮಾಲೀಕರು ಒಟ್ಟು 437 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡು ನಗರಪಾಲಿಕೆಗೆ ವಂಚನೆ ಮಾಡುತ್ತಿದ್ದಾರೆ. ಜಿಬಿಎ ಕಾಯ್ದೆ ಪ್ರಕಾರ ಅಂತಹ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರು ತಕ್ಷಣವೇ ಅಸ್ತಿ ತೆರಿಗೆ ಪಾವತಿ ಮಾಡುವಂತೆ ಅವರು ಸೂಚನೆ ನೀಡಿದ್ದಾರೆ.
ಬಾಕಿ ಉಳಿಸಿಕೊಂಡಿರುವ ತೆರಿಗೆ ವಿವರ ಇಂತಿದೆ;
ಪೂರ್ವ 119, 90,84,835 ರೂ..
ಕೇಂದ್ರ 81,26,73,674 ರೂ..
ಉತ್ತರ 79,83,21,206 ರೂ..
ದಕ್ಷಿಣ 72,30,31,705 ರೂ..
ಪಶ್ಚಿಮ 84,23,98,894 ,ರೂ..
ಒಟ್ಟು 437,55,50,314 ರೂ.
