Sunday, April 12, 2026
Homeಬೆಂಗಳೂರುಬೆಂಗಳೂರು ಕ್ರೈಂ ನ್ಯೂಸ್ : ಸರ ಕದ್ದು ಸಿಕ್ಕಿ ಬಿದ್ದ ಮಹಿಳೆ

ಬೆಂಗಳೂರು ಕ್ರೈಂ ನ್ಯೂಸ್ : ಸರ ಕದ್ದು ಸಿಕ್ಕಿ ಬಿದ್ದ ಮಹಿಳೆ

Bangalore Crime News: Woman caught stealing a chain

ಬೆಂಗಳೂರು,ಮಾ.27- ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಹೋಗಿ ಸರ ಎಗರಿಸಿ ಪರಾರಿಯಾಗಿದ್ದ ಹೊರ ರಾಜ್ಯದ ಮಹಿಳೆಯನ್ನು ಜೆಪಿನಗರ ಠಾಣೆ ಪೊಲೀಸರು ಬಂದಿಸಿ 1.34 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಜೆಪಿನಗರದ 3ನೇ ಹಂತ 8ನೇ ಮುಖ್ಯ ರಸ್ತೆಯಲ್ಲಿರುವ ಜ್ಯೂವೆಲರಿ ಅಂಗಡಿಯೊಂದಕ್ಕೆ ಮಾ.12ರಂದು ಮಹಿಳೆಯೊಬ್ಬಳು ಗ್ರಾಹಕರಂತೆ ಹೋಗಿ ಚಿನ್ನ ಸರ ತೋರಿಸುವಂತೆ ಹೇಳಿದ್ದಾಳೆ.

ಅಂಗಡಿಯ ಸಿಬ್ಬಂದಿ ಸರಗಳಿದ್ದ ಬಾಕ್ಸ್ ನ್ನು ತೆಗೆದು ಸರಗಳನ್ನು ತೋರಿಸಿದ್ದಾರೆ. ಆ ಸಂದರ್ಭದಲ್ಲಿ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ಒಂದು ಸರವನ್ನು ಕಳ್ಳತನ ಮಾಡಿಕೊಂಡು ಅಂಗಡಿಯಿಂದ ಹೋಗಿದ್ದಾಳೆ.

ಮಾ.15 ರಂದು ಬ್ರ್ಯಾಂಚ್‌ ಮ್ಯಾನೆಜರ್‌ ಅಂಗಡಿಯಲ್ಲಿರುವ ಚಿನ್ನಾಭರಣಗಳನ್ನು ಪರಿಶೀಲನೆ ಮಾಡುವಾಗ ಒಂದು ಚಿನ್ನದ ಸರ ಇಲ್ಲದಿರುವುದು ಕಂಡು ಬಂದಿದೆ.ತಕ್ಷಣ ಅವರು ಅಂಗಡಿಯಲ್ಲಿರುವ ಸಿಸಿ ಟಿವಿ ಪುಟೇಜ್‌ ಪರಿಶೀಲನೆ ಮಾಡಿದಾಗ ಮಹಿಳೆ ಒಬ್ಬರು ಸರವನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬೇಗೂರು ಬಳಿಯ ಗಾರೆಭಾವಿಪಾಳ್ಯದ ಬಸ್‌‍ ನಿಲ್ದಾಣ ಬಳಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರ ಕಳ್ಳತನ ಮಾಡಿರುವುದಾಗಿ ಹೇಳಿದ್ದಾಳೆ. ಆರೋಪಿತೆಯನ್ನು ಸುದೀರ್ಘ ವಿಚಾರಣೆ ನಡೆಸಿ ತುಮಕೂರು ಜಿಲ್ಲೆಯ ಬ್ಯಾಂಕರ್‌ರ‍ಸವೊಂದರಲ್ಲಿ ಅಡಮಾನವಿಟ್ಟಿದ್ದ 11.98 ಗ್ರಾಂನ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಂಡಿದ್ದು, ಇದರ ಮೌಲ್ಯ 1.34 ಲಕ್ಷ ರೂಗಳೆಂದು ಅಂದಾಜಿಸಲಾಗಿದೆ.

ಮಾಲೀಕರ ಮನೆಯಲ್ಲೇ ಕಳ್ಳತನ, ಮನೆಗೆಲಸದಾಕೆ ಬಂಧನ : 2.25 ಲಕ್ಷ ಹಣ, ಆಭರಣ ಜಪ್ತಿ

ಬೆಂಗಳೂರು,ಮಾ.27- ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಮಾಲೀಕರ ಕಣ್ತಪ್ಪಿಸಿ ಹಣ, ಆಭರಣ ಕಳ್ಳತನ ಮಾಡಿದ್ದ ಮನೆಗೆಲದಾಕೆಯನ್ನು ಜೆಪಿನಗರ ಠಾಣೆ ಪೊಲೀಸರು ಬಂಧಿಸಿ 2.25 ಲಕ್ಷ ರೂ.ನಗದು ಸೇರಿದಂತೆ 5.13 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಜೆಪಿನಗರ 2ನೇ ಹಂತದ 17ನೇ ಮುಖ್ಯ ರಸ್ತೆ ನಿವಾಸಿಯೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಕೊಠಡಿಯ ಬೀರುವಿನಲ್ಲಿದ್ದ 3.20 ಲಕ್ಷ ನಗದು ಹಾಗೂ 39 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾಳೆ.

ಈಕೆಯ ಕೈಚಳಕ ಮಾಲೀಕರ ಗಮನಕ್ಕೆ ಬಂದಿಲ್ಲ. ಮಾ.14 ರಂದು ಹಣದ ಅವಶ್ಯಕತೆ ಇದ್ದುದ್ದರಿಂದ ಬೀರು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣ ಇರಲಿಲ್ಲ.
ಮಾಲೀಕರಿಗೆ ಮನೆಗೆಲಸ ದಾಕೆಯ ಮೇಲೆ ಅನುಮಾನ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮನೆಗೆಲಸದಾಕೆ ವಾಸವಾಗಿದ್ದ ಜಯನಗರ 9ನೇ ಬ್ಲಾಕ್‌ನ ಮನೆಯಿಂದ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಣ, ಆಭರಣ ಕಳ್ಳತನ ಮಾಡಿರುವುದಾಗಿ ಹೇಳಿದ್ದಾಳೆ.

ಆಭರಣವನ್ನು ಜಯನಗರ 4ನೇ ಬ್ಲಾಕ್‌ನ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ :

ಮಾಡಿರುವುದಾಗಿ ಹಾಗೂ ಹಣವನ್ನು ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾಳೆ. ಆಕೆಯ ಮಾಹಿತಿಯಂತೆ ಆಕೆಯ ವಾಸದ ಮನೆಯಿಂದ 2.25 ಲಕ್ಷ ಹಣ ಹಾಗೂ ಆಭರಣ ಅಂಗಡಿಯಿಂದ 22.5 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಹರೀಶ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಹೊತ್ತಿ ಉರಿದ ಕೆಎಸ್‌‍ಆರ್‌ಟಿಸಿ ಬಸ್‌‍ : ಚಾಲಕನ ಸಮಯಪ್ರಜ್ಞೆ, ಪ್ರಯಾಣಿಕರು ಸುರಕ್ಷಿತ
ಬೆಂಗಳೂರು,ಮಾ.27-ನಗರದ ಕೆಂಪೇಗೌಡ ಬಸ್‌‍ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆಎಸ್‌‍ಆರ್‌ಟಿಸಿ ಬಸ್‌‍ ನಿಲ್ದಾಣದ ಕೆಲ ಅಂತರದಲ್ಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಿನ್ನೆ ರಾತ್ರಿ ಸುಮಾರು 10.20ರ ಸುಮಾರಿನಲ್ಲಿ ಈ ಬಸ್‌‍ ಪ್ರಯಾಣಿಕರನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಮೆಜೆಸ್ಟಿಕ್‌ನಿಂದ ಪ್ರಯಾಣ ಬೆಳೆಸಿದೆ. ಈ ಬಸ್‌‍, ಮೆಜೆಸ್ಟಿಕ್‌ ದಾಟಿ ಲೂಲು ಮಾಲ್‌ ಮುಂಭಾಗ ಬರುತ್ತಿದ್ದಂತೆ ಬಸ್‌‍ನ ಇಂಜಿನ್‌ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಬರುತ್ತಿರುವುದನ್ನು ದಾರಿಹೋಕರು ಗಮನಿಸಿ ಬಸ್‌‍ ಚಾಲಕನಿಗೆ ಹೇಳಿದ್ದಾರೆ.

ತಕ್ಷಣವೇ ಚಾಲಕ ಬಸ್‌‍ನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಯುವಂತೆ ಸೂಚಿಸಿದ್ದು, ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿ ಇಡೀ ಬಸ್ಸನ್ನು ಆವರಿಕೊಂಡು ಹೊತ್ತಿ ಉರಿದಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನದೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಬೆಂಕಿ ನಂದಿಸುವ ಕಾರ್ಯಾಚರಣೆಯ ಕಾರಣದಿಂ ದಾಗಿ ರಾಜಾಜಿನಗರ ಮತ್ತು ಮೆಜೆಸ್ಟಿಕ್‌ ಸಂಪರ್ಕಿಸುವ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಚಾರಿ ಪೊಲೀಸರು ಸ್ಥಳದಲ್ಲಿದ್ದು, ನಂತರ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಕೆಎಸ್‌‍ಆರ್‌ಟಿಸಿ ಬಸ್‌‍ ಮೂಲಕ ಶಿವಮೊಗ್ಗಕ್ಕೆ ಕಳುಹಿಸಲಾಯಿತು. ಬಸ್‌‍ ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಬಸ್‌‍ನ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುವುದರ ಬಗ್ಗೆ ತನಿಖೆ ಮುಂದುವರೆದಿದೆ.

ಮದ್ಯ ಸೇವಿಸಿ ವಾಹನ ಚಾಲನೆ : ಶಾಲಾ ವಾಹನ, ನೀರಿನ ಟ್ಯಾಂಕರ್‌ ಚಾಲಕರುಗಳ ವಿರುದ್ಧ ಕಾರ್ಯಾಚರಣೆ

ಬೆಂಗಳೂರು,ಮಾ.27-ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಶಾಲಾ ವಾಹನ ಮತ್ತು ನೀರಿನ ಟ್ಯಾಂಕರ್‌ ಚಾಲಕರುಗಳ ವಿರುದ್ಧ ನಗರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 73 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮದ್ಯ ಸೇವಿಸಿ ವಾಹನ ಚಾಲನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಶಾಲಾ ವಾಹನ ಚಾಲಕರುಗಳ ವಿರುದ್ಧ 59 ಹಾಗೂ ನೀರಿನ ಟ್ಯಾಂಕರ್‌ ಚಾಲಕರುಗಳ ವಿರುದ್ಧ 14 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ವಿಶೇಷ ಕಾರ್ಯಾಚರಣೆಯಲ್ಲಿ ಚಾಲಕರುಗಳ ಚಾಲನಾ ಪರವಾನಿಗೆಯನ್ನು ಅಮಾನತ್ತು ಪಡಿಸಲು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೋಡಿ ಕೊಲೆ ಪ್ರಕರಣ : ಮಹಿಳೆ ಬಂಧನ

ಬೆಂಗಳೂರು,ಮಾ.27-ನಗರದಲ್ಲಿ ನಿನ್ನೆ ಹಾಡಹಗಲೇ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಪೀಣ್ಯಾ ಠಾಣೆ ಪೊಲೀಸರು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದು ಇದೀಗ ಆತನ ತಾಯಿಯನ್ನು ಬಂಧಿಸಿದ್ದಾರೆ.ತಿಗಳರಪಾಳ್ಯದ ಯಮುನಾ (36) ಮತ್ತು ಈಕೆಯ ಸಹೋದರ ಸುದೀಪ್‌ (34) ಕೊಲೆ ಪ್ರಕರಣ ಸಂಬಂಧ 16 ವರ್ಷದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಪೊಲೀಸರ ವಶದಲ್ಲಿದ್ದು ಆತನ ತಾಯಿ ಛಾಯಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆ ವಿವರ:ಯಮುನಾ ಅವರ ಪತಿಯೊಂದಿಗಿನ ಅಕ್ರಮ ಸಂಬಂಧ ಪ್ರಶ್ನಿಸಲು ಛಾಯಾ ಮನೆಗೆ ಹೋಗಿ ಜಗಳವಾಡಿದ ಅಕ್ಕ-ತಮನನ್ನು ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕ ಕೊಲೆ ಮಾಡಿದ್ದಾನೆ ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.ಈ ಪ್ರಕರಣದಲ್ಲಿ ಛಾಯಾಳ ಪತಿಯ ಕೈವಾಡವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ನಡುವೆ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಒಡಿಶಾದ ಗಾರೆಕೆಲಸಗಾರನ ಕೊಲೆ

ಬೆಂಗಳೂರು,ಮಾ.27-ಒಡಿಶಾ ಮೂಲದ ಗಾರೆಕೆಲಸಗಾರನ ಕತ್ತು ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಗೋಣಿಚೀಲದಲ್ಲಿ ಶವ ತಂದು ಬಿಸಾಡಿ ಹೋಗಿರುವ ಘಟನೆ ಹೆಬ್ಬಗೋಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಶವದ ಗುರುತು ಪೊಲೀಸರು ಪತ್ತೆ ಹಚ್ಚಿದ್ದು, ಒಡಿಶಾ ಮೂಲದ ಸುನಿಲ್‌ (45) ಎಂಬುವುದು ಗೊತ್ತಾಗಿದೆ.

ಈ ವ್ಯಕ್ತಿಯನ್ನು ಸ್ನೇಹಿತರೇ ಬೇರೆಕಡೆ ಕೊಲೆ ಮಾಡಿದ ಶವವನ್ನು ಗೋಣಿಚೀಲದಲ್ಲಿ ಹಾಕಿ ಕಟ್ಟಿಕೊಂಡು ಬಂದು ರಸ್ತೆ ಬದಿ ಬಿಸಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್‌ ತಾಲ್ಲೂಕಿನ ಯಾರಂಡಹಳ್ಳಿಯಲ್ಲಿ ವಾಸವಾಗಿದ್ದ ಸುನಿಲ್‌ ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದನು. ಮೊನ್ನೆ ರಾತ್ರಿ ದುಷ್ಕರ್ಮಿಗಳು ಈತನನ್ನು ಕತ್ತು ಕೊಯ್ದು ಕೊಲೆ ಮಾಡಿ ನಂತರ ಶವವನ್ನು ಗೋಣಿಚೀಲದಲ್ಲಿ ಹಾಕಿಕೊಂಡು ರಸ್ತೆ ಬದಿ ಬಿಸಾಡಿ ಪರಾರಿಯಾಗಿದ್ದಾರೆ.

ನಿನ್ನೆ ಈ ಮಾರ್ಗದಲ್ಲಿ ಹೋಗುತ್ತಿದ್ದ ಸ್ಥಳೀಯರು ಅನುಮಾನಾಸ್ಪದ ರೀತಿಯಲ್ಲಿ ಮೂಟೆ ಬಿದ್ದಿರುವುದನ್ನು ಗಮನಿಸಿದ ತಕ್ಷಣ ಹೆಬ್ಬಗೋಡಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೋಣಿ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

RELATED ARTICLES

Latest News