ಬೆಂಗಳೂರು, ಮಾ.24- ನಗರ ಪೊಲೀಸರು ವಿವಿಧ ಕಡೆಗಳಲ್ಲಿ ದಾಳಿ ಮಾಡಿ ಹೊರರಾಜ್ಯದ ಆರೋಪಿ ಸೇರಿದಂತೆ ಐದು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಒಟ್ಟು 11.4 ಕೋಟಿ ಮೌಲ್ಯದ ಗಾಂಜಾ, ಎಂಡಿಎಂಎ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ರಸ್ತೆಯ ನಾಯಂಡಹಳ್ಳಿ ಸಿಗ್ನಲ್ ಬಳಿ ಮಾದಕ ವಸ್ತು ಗಾಂಜಾ ಸಾಗಿಸುತ್ತಿರುವ
ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ 3.32 ಕೋಟಿ ಮೌಲ್ಯದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ.
ಉಪ್ಪಾರಪೇಟೆ ಠಾಣೆ ಪೊಲೀಸರು ಆರ್‌ಕೆ ಪುರಂನ ಲಾಡ್‌್ಜವೊಂದರ ಮೇಲೆ ದಾಳಿ ಮಾಡಿ 7.60 ಕೋಟಿ ಮೌಲ್ಯದ 3 ಕೆಜಿ 900 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಕಾಡುಗೋಡಿ ಠಾಣೆ ಪೊಲೀಸರು ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ 12 ಲಕ್ಷ ಮೌಲ್ಯದ ಗಾಂಜಾ ಹಾಗೂ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಬಿ ಪೊಲೀಸರು 3.32 ಕೋಟಿ ಮೌಲ್ಯದ 332 ಕೆಜಿ ಗಾಂಜಾ, ಒಂದು ಗೂಡ್ಸ್ ವಾಹನ, ಮೊಬೈಲ್, ಉಪ್ಪಾರಪೇಟೆ ಠಾಣೆ ಪೊಲೀಸರು 7.60 ಕೋಟಿ ಮೌಲ್ಯದ 3ಕೆಜಿ 900 ಗ್ರಾಂ ಎಂಡಿಎಂಎ ಹಾಗೂ ಕಾಡುಗೋಡಿ ಠಾಣೆ ಪೊಲೀಸರು 12 ಲಕ್ಷ ಮೌಲ್ಯದ 12 ಗ್ರಾಂ ಎಂಡಿಎಂಎ, 11 ಕೆಜಿ 170 ಗ್ರಾಂ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೆ ಐಎನ್‌ಆರ್ ಮೌಲ್ಯ 5.77 ಕೋಟಿ ರೂ.ಗಳಾದರೆ, ಮಾರುಕಟ್ಟೆ ಮೌಲ್ಯ 11.29 ಕೋಟಿ ರೂ.ಗಳೆಂದು ಪೊಲೀಸರು ತಿಳಿಸಿದ್ದಾರೆ.ಈ ಮಾಹಿತಿಗಳನ್ನಾಧರಿಸಿ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸ್ಥಳಗಳ ಮೇಲೆ ದಾಳಿ ಮಾಡಿ ಹೊರರಾಜ್ಯದ ವ್ಯಕ್ತಿ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶಿ ಮೂಲದ ಅಪರಿಚಿತ ವ್ಯಕ್ತಿಯಿಂದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತು ಎಂಡಿಎಂಎ ಮತ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ.
