ಬೆಂಗಳೂರು, ಮಾ.24- ಬಜೆಟ್ ಅಧಿವೇಶನ ನಿಗದಿತ ವೇಳಾ ಪಟ್ಟಿಗಿಂತಲೂ ಒಂದು ದಿನ ಮುಂಚಿತವಾಗಿ ಅಂತ್ಯಗೊಳ್ಳುವುದು ಬಹುತೇಕ ಖಚಿತವಾಗಿದೆ.ಮಾ. 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಅನ್ನು ಮಂಡಿಸಿದ್ದರು. ಒಟ್ಟು 14 ದಿನಗಳ
ಬಜೆಟ್ ಅಧಿವೇಶನ ನಿಗದಿಯಾಗಿತ್ತು.
ವೇಳಾ ಪಟ್ಟಿಯ ಪ್ರಕಾರ ಮಾ.27ರ ವರೆಗೂ ಅಧಿವೇಶನ ನಡೆಯಬೇಕಿತ್ತು. ಆದರೆ, ಒಂದು ದಿನ ಮುಂಚಿತವಾಗಿ ನಾಳೆಗೆ ಕೊನೆಯಾಗುವ ಸಾಧ್ಯತೆಯಿದೆ. ಬಜೆಟ್ ಹಾಗೂ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಉಭಯ ಸದನಗಳಲ್ಲೂ ಉತ್ತರ ನೀಡುವ ಸಾಧ್ಯತೆ ಇದೆ. ಅನಂತರ ಸಂಜೆಯ ವೇಳೆಗೆ ಕಲಾಪವನ್ನು ಮುಂದೂಡುವ ಚರ್ಚೆಗಳಾಗಿವೆ. ಇಂದು ಬೆಳಗ್ಗೆ ನಡೆದ ವಿಧಾನಮಂಡಲ ಕಾರ್ಯಕಲಾಪ ಕಲಹಾ ಸಮಿತಿ ಸಭೆಯಲ್ಲಿ ಕಲಾಪವನ್ನು ಮುಂದೂಡುವ ಚರ್ಚೆಯಾಗಿದೆ.
ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಅಲ್ಲಿಗೆ ಪ್ರಚಾರಕ್ಕೆ ತೆರಳುವ ಒತ್ತಡ ನಾಯಕರಿಗಿದೆ. ಹೀಗಾಗಿ ಆತುರಾತುರವಾಗಿ ಕಲಾಪವನ್ನು ಮೊಟಕುಗೊಳಿಸಲಾಗುತ್ತಿದೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿಗದಿತ ವೇಳಾಪಟ್ಟಿಯಂತೆ ಪೂರ್ಣಾವಧಿಯವರೆಗೂ ಕಲಾಪ ನಡೆಸಬೇಕು ಎಂದು ಒತ್ತಡ ಹೇರಿದರು.
ಈ ನಡುವೆ ನಾಳೆ ಶ್ರೀರಾಮ ನವಮಿ ಆಚರಣೆಯಿದ್ದು, ಅದಕ್ಕೆ ರಜೆ ನೀಡಬೇಕೆಂಬ ಒತ್ತಾಯವನ್ನು ಬಿಜೆಪಿ ಮಾಡಿತ್ತು. ಒಂದು ದಿನದ ಮಟ್ಟಿಗೆ ರಜೆ ನೀಡಿ ಮತ್ತೆ ಶುಕ್ರವಾರ ಕಲಾಪ ನಡೆಸುವ ಬದಲಾಗಿ ಒಮೆಲೇ ಮುಂದೂಡಿಕೆ ಮಾಡುವುದು ಸೂಕ್ತ ಎಂಬ ಸಲಹೆ ಆಡಳಿತ ಪಕ್ಷದವರಿಂದ ಕೇಳಿ ಬಂದಿತು.
ರಂಜಾನ್-ಯುಗಾದಿ ಸಲುವಾಗಿ ಕಳೆದವಾರ ಬುಧವಾರವೇ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಅದೇ ರೀತಿ ಶ್ರೀರಾಮ ನವಮಿಗೂ ರಜೆ ನೀಡಬೇಕೆಂಬುವುದು ವಿರೋಧ ಪಕ್ಷಗಳ ಆಗ್ರಹ.ಆದರೆ ಅದಕ್ಕೆ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ, ಒಂದು ದಿನ ಮೊದಲೇ ಕಲಾಪವನ್ನು ಮುಂದೂಡುವ ಚರ್ಚೆಗಳನ್ನು ನಡೆಸಲಾಗಿದೆ.
