ಬೆಂಗಳೂರು,ಮಾ.3-ಕ್ಷುಲ್ಲಕ ಕಾರಣಕ್ಕೆ ಇಬ್ಬರು ದುಷ್ಕರ್ಮಿಗಳು ಸೇರಿಕೊಂಡು ಯುವಕನನ್ನು ಡ್ರ್ಯಾಗರ್‌ನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.ಕೊಲೆಯಾದ ಯುವಕನನ್ನು ಶಶಿಕುಮಾರ್ (30) ಎಂದು ಗುರುತಿಸಲಾಗಿದೆ.
ಬಸವೇಶ್ವರ ನಗರದ ಶಿವನಹಳ್ಳಿ ತಿಮಯ್ಯ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ವೆಜ್ ಆ್ಯಂಡ್ ದೋಸೆ ಕಾರ್ನರ್ ಹೋಟೆಲ್‌ಗೆ ರಾತ್ರಿ 10.50 ರ ಸುಮಾರಿನಲ್ಲಿ ಶಶಿಕುಮಾರ್ ದೋಸೆ ತಿನ್ನಲು ಬಂದಿದ್ದಾರೆ.ಇದೇ ಹೋಟೆಲ್‌ಗೆ ಮಂಜುನಾಥ್ ಮತ್ತು ಭಾಗ್ಯರಾಜ್ ಅಲಿಯಾಸ್ ಪಾಪು ಎಂಬುವವರು ಊಟಕ್ಕೆಂದು ಹೋಗಿದ್ದಾರೆ.
ರಾತ್ರಿ 11.30 ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಶಶಿಕುಮಾರ್ ಜೊತೆ ಈ ಇಬ್ಬರು ಜಗಳವಾಡಿ ಹಲ್ಲೆ ನಡೆಸಿದ್ದಾರೆ. ಬಳಿಕ ಡ್ರ್ಯಾಗರ್‌ನಿಂದ ಶಶಿಕುಮಾರ್‌ಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಬಸವೇಶ್ವರನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ಹೋಟೆಲ್‌ನಲ್ಲಿ ಶಶಿಕುಮಾರ್ ದೋಸೆ ತಿನ್ನುತ್ತಿದ್ದಾಗ ಆಕಸಿಕವಾಗಿ ಕಾಲು ತುಳಿದ ವಿಚಾರವನ್ನೇ ಈ ಇಬ್ಬರು ಯುವಕರು ದೊಡ್ಡದಾಗಿ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
