ಬೆಂಗಳೂರು, ಮೇ 12- ಏಳು ಜನರ ಸಾವಿಗೆ ಕಾರಣವಾದ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿತ ಪ್ರಕರಣದಲ್ಲಿ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳು ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ಲೋಪಗಳಿವೆ ಎಂದು ಜಿಲ್ಲಾಧಿಕಾರಿಗಳ ತನಿಖಾ ವರದಿ ಉಲ್ಲೇಖಿಸಿದೆ.
ಘಟನೆ ನಡೆದ ಬಳಿಕ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿತ್ತು. ಮತ್ತೊಂದೆಡೆ ಲೋಕಾಯುಕ್ತರು ಪ್ರತ್ಯೇಕ ತನಿಖೆಗೆ ನಿರ್ದೇಶನ ನೀಡಿದ್ದರು. ಲೋಕಾಯುಕ್ತ ತನಿಖಾ ತಂಡದಲ್ಲಿ ಜಿಲ್ಲಾ ನ್ಯಾಯಾಧೀಶರು, ಎಸ್‌ಪಿ ದರ್ಜೆಯ ಅಧಿಕಾರಿ ಹಾಗೂ ಲೋಕಾಯುಕ್ತ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕುಸಿದ ಗೋಡೆಯ ಮರಳು, ಮಣ್ಣು ಹಾಗೂ ಕಲ್ಲುಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಹುತೇಕ ಮುಂದಿನ ವಾರದ ಒಳಗೆ ತನಿಖಾ ವರದಿ ಲೋಕಾಯುಕ್ತರ ಕೈ ಸೇರುವ ಸಾಧ್ಯತೆ ಇದೆ. ಅದಕ್ಕೂ ಮುನ್ನಾ ಜಿಲ್ಲಾಧಿಕಾರಿಗಳ ನೇತೃತ್ವದ ತನಿಖಾ ತಂಡ ವರದಿಯನ್ನು ಸಿದ್ಧ ಪಡಿಸಿದ್ದ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಮುಂದಾಗಿದೆ.
ಆಸ್ಪತ್ರೆ ಗೋಡೆ ಪಕ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸುರಿದಿರುವುದೇ ದುರಂತಕ್ಕೆ ಮೂಲ ಕಾರಣ ಎಂದು ಜಿಲ್ಲಾಧಿಕಾರಿಗಳ ವರದಿ ಶಂಕಿಸಿದೆ. ಸುರಿದಿದ್ದ ಮಣ್ಣನ್ನು ಸೂಕ್ತ ಸಮಯದಲ್ಲಿ ತೆರವುಗೊಳಿಸದೆ ಗುತ್ತಿಗೆದಾರರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಇಂಜಿನಿಯರ್‌ಗಳು ನಿರ್ಲಕ್ಷ್ಯತೆ ವಹಿಸಿದ್ದಾರೆ. ಗೋಡೆ ಸುಮಾರು 8 ಅಡಿ ಎತ್ತರವಿದ್ದರೆ 6 ಅಡಿವರೆಗೂ ಮಣ್ಣು ಹಾಕಲಾಗಿತ್ತು ಎಂದು ವಿವರಿಸಲಾಗಿದೆ.
ಗೋಡೆಯ ಸಮೀಪ ಕ್ರಿಕೆಟ್ ಅಭ್ಯಾಸಕ್ಕಾಗಿ ನೆಟ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಅದಕ್ಕಾಗಿ
ಸಿಎಸ್‌ಆರ್ ನಿಧಿಯಿಂದ ದಾನಿಯೊಬ್ಬರ ಸಹಕಾರದಲ್ಲಿ ಆಸ್ಪತ್ರೆ ಆವರಣದಲ್ಲಿ ಕ್ರೀಡಾಂಗಣ ಮಾದರಿಯ ವ್ಯವಸ್ಥೆ ರೂಪಿಸಿ, ಕ್ರಿಕೆಟ್ ಅಭ್ಯಾಸಕ್ಕೆ ನೆಟ್ ಆವರಣ ನಿರ್ಮಿಸಲಾಗುತ್ತಿತ್ತು. ಇದಕ್ಕಾಗಿ ಮಣ್ಣು ಸುರಿದಿದ್ದು, ಆಸ್ಪತ್ರೆ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸಿರಲಿಲ್ಲ ಎಂದು ದೂರಲಾಗಿದೆ.
ದುರಂತ ನಡೆದ ಸಂದರ್ಭದಲ್ಲಿ ಆಸ್ಪತ್ರೆ ಮುಖ್ಯಸ್ಥರಿಗೆ ನೋಟೀಸ್ ನೀಡಲು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಯನ್ನು ಅಮಾನತುಗೊಳಿಸಲು ಮುಖ್ಯಮಂತ್ರಿ ಸೂಚಿಸಿದ್ದರು. ತನಿಖಾ ವರದಿ ಬಳಿಕ ಮತ್ತಷ್ಟು ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಇನ್ನೇನು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
