ಬೆಂಗಳೂರು, ಮಾ.8- ನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸುಮಾರು 17.55 ಕೋಟಿ ಮೌಲ್ಯದ 2.19 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ಗೋಮಾಳ, ಕುಂಟೆ, ಬಂಡಿದಾರಿ, ಸ್ಮಶಾನ, ಸರ್ಕಾರಿ ಕಟ್ಟೆ, ಖರಾಬು ಹಾಗೂ ಗುಂಡು ತೋಪು ಜಾಗಗಳ ಮೇಲೆ ನಡೆದಿದ್ದ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರಂ ಹೋಬಳಿಯ ಹಗದೂರು ಗ್ರಾಮದಲ್ಲಿ ಸ.ನಂ.19 ರ ಗೋಮಾಳ ಜಾಗದ 0.10 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇದರ ಅಂದಾಜು ಮೌಲ್ಯ 5 ಕೋಟಿ. ಬಿದರಹಳ್ಳಿ ಹೋಬಳಿಯ ಬಿದರಹಳ್ಳಿ ಗ್ರಾಮದ ಸ.ನಂ.65 ರ ಕುಂಟೆ ಜಾಗದ 0.06 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಅಂದಾಜು ಮೌಲ್ಯ 0.50 ಲಕ್ಷ. ವಡೇರಹಳ್ಳಿ ಗ್ರಾಮದ ಸ.ನಂ.49/1, 49/2, 50/1, 50/4, 50/5 ರ ಬಂಡಿದಾರಿ ಜಾಗದ 0.17 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇದರ ಮೌಲ್ಯ ಸುಮಾರು 5 ಕೋಟಿ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಬಸವನಪುರ ಗ್ರಾಮದ ಸ.ನಂ.35 ರ ಸ್ಮಶಾನ ಜಾಗದ 0.05 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇದರ ಅಂದಾಜು ಮೌಲ್ಯ 0.85 ಲಕ್ಷ. ತಾವರೆಕೆರೆ ಹೋಬಳಿಯ ಬೈಚಗುಪ್ಪೆ ಗ್ರಾಮದ ಸ.ನಂ.23 ರ ಸರ್ಕಾರಿ ಕಟ್ಟೆ ಜಾಗದ 0.05 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಅಂದಾಜು ಮೌಲ್ಯ 0.75 ಲಕ್ಷ. ಕೆಂಗೇರಿ ಹೋಬಳಿಯ ವಳಗೇರಹಳ್ಳಿ ಗ್ರಾಮದ ಸ.ನಂ.16 ರ ಸರ್ಕಾರಿ ಖರಾಬು ಜಾಗದ 0.20 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇದರ ಅಂದಾಜು ಮೌಲ್ಯ 2.65 ಕೋಟಿ.ರೂ.ಗಳಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ವಡ್ಡರಹಳ್ಳಿ ಗ್ರಾಮದ ಸ.ನಂ.46 ರ ಸರ್ಕಾರಿ ಕಟ್ಟೆ ಜಾಗದ 0.20 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇದರ ಅಂದಾಜು ಮೌಲ್ಯ ಸುಮಾರು 2 ಕೋಟಿ.ಯಲಹಂಕ ತಾಲ್ಲೂಕಿನ ಹೆಸರಘಟ್ಟ-2 ಹೋಬಳಿಯ ಶಿವಕೋಟೆ ಗ್ರಾಮದ ಸ.ನಂ.40 ರ ಗುಂಡು ತೋಪು ಜಾಗದ 0.16 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇದರ ಅಂದಾಜು ಮೌಲ್ಯ 0.80 ಲಕ್ಷ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
