Monday, April 20, 2026
Homeಬೆಂಗಳೂರುಸ್ವಚ್ಛತೆ ಕಾಪಾಡಿಕೊಳ್ಳದ ಮಾಂಸ ಮಳಿಗೆಗಳ ಮೇಲೆ 'ದಂಡ' ಪ್ರಹಾರ

ಸ್ವಚ್ಛತೆ ಕಾಪಾಡಿಕೊಳ್ಳದ ಮಾಂಸ ಮಳಿಗೆಗಳ ಮೇಲೆ ‘ದಂಡ’ ಪ್ರಹಾರ

'Fine' for meat shops that do not maintain cleanliness

ಬೆಂಗಳೂರು,ಮಾ.3- ಕೋಳಿ ಮತ್ತು ಮಾಂಸ ಮಳಿಗೆಗಳ ಮೇಲೆ ವಿಶೇಷ ತಪಾಸಣೆ ಮಾಡುತ್ತಿರುವ ಪಾಲಿಕೆ ಅಧಿಕಾರಿಗಳು ಸ್ವಚ್ಚತೆ ಕಾಪಾಡಿಕೊಳ್ಳದವರ ವಿರುದ್ಧ ದಂಡ ಪ್ರಯೋಗ ಮಾಡುತ್ತಿದೆ.

ಯಲಹಂಕ ಉಪನಗರ ವ್ಯಾಪ್ತಿಯ ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳಲ್ಲಿ ಆರೋಗ್ಯ ಮತ್ತು ಪರವಾನಗಿ ಮಾನ್ಯತೆ ಪರಿಶೀಲನೆಗಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ಪಶುಪಾಲನಾ ಇಲಾಖೆ ವತಿಯಿಂದ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸಲಾಯಿತು.

ತಪಾಸಣೆ ವೇಳೆ ಒಟ್ಟು 10 ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ವ್ಯಾಪಾರ ಪರವಾನಗಿ ಮತ್ತು ಸ್ವಚ್ಛತಾ ಮಾನದಂಡಗಳು, ಶೀತಲೀಕರಣ ವ್ಯವಸ್ಥೆ, ಮಾಂಸದ ಸಂಗ್ರಹಣೆ ಹಾಗೂ ಕಸದ ವಿಲೇವಾರಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸ್ವಚ್ಚತೆ ಕಾಪಾಡದ ಹಲವು ಮಾಂಸ ಅಂಗಡಿಗಳಿಗೆ ದಂಡ ವಿಧಿಸಲಾಯಿತು.ಕೆಲವು ಮಳಿಗೆಗಳಲ್ಲಿ ಪರವಾನಗಿ ನವೀಕರಣ ಮಾಡದಿರುವುದು, ಸ್ವಚ್ಛತಾ ಕೊರತೆ ಹಾಗೂ ಆರೋಗ್ಯ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸದಿರುವುದು ಪತ್ತೆಯಾಗಿದೆ.

ಈ ಹಿನ್ನೆಲೆ ಸಂಬಂಧಿತ ಮಳಿಗೆ ಮಾಲೀಕರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ನೋಟಿಸ್‌‍ ಜಾರಿ ಮಾಡಲಾಗಿದೆ ಎಂದು ಉತ್ತರನಗರಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಸ್ವಚ್ಛತೆ ಹಾಗೂ ಪರವಾನಗಿ ಹೊಂದಿರುವ ಮಳಿಗೆಗಳಿಂದ ಮಾತ್ರ ಮಾಂಸ ಖರೀದಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಯಲಹಂಕ ಉಪನಗರ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಇಂತಹ ತಪಾಸಣೆ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು.

ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ತಪಾಸಣೆ ವೇಳೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಆರ್‌. ಮನೋಹರ್‌ ಹಾಗೂ ಸಿಬ್ಬಂದಿಗಳಾದ ನಾರಾಯಣರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES

Latest News